Mysore
29
scattered clouds

Social Media

ಶುಕ್ರವಾರ, 27 ಡಿಸೆಂಬರ್ 2024
Light
Dark

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ಬಿ.ವೈ.ವಿಜಯೇಂದ್ರ ಸಂತಾಪ

ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆಯಿಂದ ವಿಧಿವಶರಾಗಿರುವ ಮಾಜಿ ಪ್ರಧಾನಿ ಮನ ಮೋಹನ್‌ ಸಿಂಗ್‌ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ವಿಜಯೇಂದ್ರ ಅವರು, ದೇಶದ ಅರ್ಥ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವಹಿಸಿ, ಆರ್ಥಿಕ ಉದಾರೀಕರಣದ ರೂವಾರಿಯಾಗಿ ಭಾರತದ ಬೆಳವಣಿಗೆಗೆ ಅಮೋಘ ಕೊಡುಗೆ ನೀಡಿದ್ದ ವಿಶ್ವ ಕಂಡ ಶ್ರೇಷ್ಠ ಆರ್ಥಿಕ ತಜ್ಞರೂ ಆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುವೆ. ಅವರ ಸರಳತೆ, ಸಜ್ಜನಿಕೆಯಿಂದಾಗಿ ಅಪರೂಪದ ವಿನಯವಂತ ಪಾಂಡಿತ್ಯ ಮೂರ್ತಿಯನ್ನು ಅವರಲ್ಲಿ ಕಾಣುವಂತಾಗಿತ್ತು. ಪಕ್ಷಾತೀತವಾಗಿ ಎಲ್ಲರ ಹೃದಯದಲ್ಲೂ ಸ್ನೇಹದ ಬಾಂಧವ್ಯ ಬೆಸೆದಿದ್ದ ಅವರು ಅಕ್ಷರಶಃ ಅಜಾತಶತ್ರುವಾಗಿದ್ದರು.

ಎಂದೂ ಯಾರೊಂದಿಗೂ ವಿರಸ ಕಟ್ಟಿಕೊಳ್ಳದೇ ಒಬ್ಬ ಶಿಸ್ತು ಬದ್ಧ ಅಧಿಕಾರಿಯಾಗಿ, ಸರಳತೆಯ ರಾಜಕಾರಣಿಯಾಗಿ, ಭಾರತದ ಪ್ರಧಾನಿಗಳಾಗಿ ಅವರ ಹತ್ತು ವರ್ಷಗಳ ಸುದೀರ್ಘ ಸೇವೆ ಮಹತ್ವದ ಮೈಲಿಗಲ್ಲು. ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿ, ದೇಶದ ವಿತ್ತ ಸಚಿವರಾಗಿ ಅವರು ಇಟ್ಟ ಹೆಜ್ಜೆಗಳು ಆರ್ಥಿಕ ಸುಧಾರಣೆಯ ಮಹತ್ವದ ತಿರುವುಗಳು.

ಜನ ಸಾಮಾನ್ಯರು, ಕಡು ಬಡವರು ಆರ್ಥಿಕ ಚೇತನ ಹೊಂದುವಂತಾಗಲು ಎಲ್ಲಾ ಹಂತದಲ್ಲೂ ದೇಶಕ್ಕೆ ಬಂಡವಾಳ ಹರಿದುಬರುವಂತಾಗಲು ಮನಮೋಹನ್ ಸಿಂಗ್ ಅವರು ತೋರಿಸಿದ ಆರ್ಥಿಕ ಜಾಣ್ಮೆಯಿಂದಾಗಿ ಭಾರತದ ಕೈಗಾರಿಕೆ, ಕೃಷಿ, ಶಿಕ್ಷಣ, ವಾಣಿಜ್ಯ ಸೇರಿದಂತೆ ಇತರ ಕ್ಷೇತ್ರಗಳು ಚೈತನ್ಯ ತುಂಬಿಕೊಳ್ಳಲು ಕಾರಣವಾಯಿತು.

ಮನಮೋಹನ್ ಸಿಂಗ್ ಅವರ ಅಗಲಿಕೆಯಿಂದ ಒಬ್ಬ ಸಜ್ಜನಿಕೆಯ ಆಡಳಿತಗಾರರನ್ನಷ್ಟೇ ದೇಶ ಕಳೆದುಕೊಂಡಿಲ್ಲ, ಮೃದು ಭಾಷೆಯ ಒಬ್ಬ ಮಹಾನ್ ಶ್ರೇಷ್ಠ ಆರ್ಥಿಕ ತಜ್ಞನನ್ನು ಕಳೆದುಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೂ ಭಾರತದ ಇತಿಹಾಸದಲ್ಲಿ ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವ, ಕೊಡುಗೆ ಹಾಗೂ ಸಾಧನೆಗಳು ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಅಗಲಿದ ಮಹಾನ್ ಚೇತನಕ್ಕೆ ಗೌರವಪೂರ್ವಕ ನಮನಗಳು ಎಂದು ಕಂಬನಿ ಮಿಡಿದಿದ್ದಾರೆ.

Tags: