ಬೆಂಗಳೂರು: ಸುಪ್ರೀಂಕೋರ್ಟ್ ಒಳ ಮೀಸಲಾತಿ ಕುರಿತು ನೀಡಿರುವ ತೀರ್ಪು ರಾಜ್ಯ ಸರ್ಕಾರದ ಮಟ್ಟದಲ್ಲಿ ಅನುಷ್ಠಾನಗೊಳ್ಳುವವರೆಗೂ ಯಾವುದೇ ಹುದ್ದೆಗಳ ನೇಮಕಾತಿ ಆದೇಶ ಮತ್ತು ಈಗಾಗಲೇ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಮಾದಿಗ ಸಮುದಾಯ ಮತ್ತು ಒಳ ಪಂಗಡಗಳ ಸಮುದಾಯ ಒತ್ತಾಯಿಸಿದೆ.
ಬೆಂಗಳೂರಿನ ಗಾಂಧಿ ಭವನದಲ್ಲಿಂದು (ಆಗಸ್ಟ್ 19) ಮಾದಿಗ ಪೊಲಿಟಿಕಲ್ ಪೋರಂ, ಶೂದ್ರ ಪ್ರತಿಷ್ಠಾನವತಿಯಿಂದ ನಡೆದ ಐತಿಹಾಸಿಕವಾದ ಒಳ ಮೀಸಲಾತಿ ತೀರ್ಪು ಕುರಿತ ಒಂದು ಮುನ್ನೋಟ ಕುರಿತ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಒಳ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ನ ತೀರ್ಪುನಿಂದ ಅನೇಕ ಸಮಯದಾಯಗಳಿಗೆ ಸುದೀರ್ಘ ಹೋರಾಟದ ಜಯವಾಗಿದೆ, ಬೆಳಗಾವಿ ಮತ್ತು ಹುಬ್ಬಳಿಯಲ್ಲಿ ನಡೆದ ನಡೆದ ಬಹುದೊಡ್ಡ ಸಮಾವೇಶ, ಅನೇಕ ಮುಖಂಡರ ಹೋರಾಟದ ಪ್ರತಿಫಲವಾಗಿ ಒಳ ಮೀಸಲಾತಿ ಜಾರಿಗೆ ಕಾಲ ಕೂಡಿ ಬಂದಿದೆ ಇದರ ಜಾರಿಗಾಗಿ ಮಾದಿಗ ಸೇರಿದಂತೆ ಎಲ್ಲ ಸಮುದಾಯಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿ ಇದರ ಜಾರಿಗೆ ನಾನೇ ನೇತೃತ್ವ ವಹಿಸುತ್ತೇನೆ ಎಂದು ಹೇಳಿದರು.
ಮಾಜಿ ಕೇಂದ್ರ ಸಚಿವ ಆನೇಕಲ್ ನಾರಾಯಣಸ್ವಾಮಿ ಮಾತನಾಡಿ, ಒಳ ಮೀಸಲಾತಿ ಕುರಿತಂತೆ ರಾಜ್ಯದ ಮಾದಿಗ ಸೇರಿದಂತೆ ಕೆಳ ಸಮುದಾಯಗಳಿಗೆ ಅರಿವು ಮೂಡಿಸುವ ಅಗತ್ಯವಾಗಿದೆ, ಇದುವರೆಗೂ ಒಳ ಮೀಸಲಾತಿ ಕುರಿತು ಬಹುತೇಕ ಜನರಿಗೆ ಸರಿಯಾದ ಅರಿವು ಇಲ್ಲ, ಒಳ ಮೀಸಲಾತಿ ತೀರ್ಪು ಕುರಿತು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
ಒಳ ಮೀಸಲಾತಿ ಕುರಿತಂತೆ ಕೇಂದ್ರದ ಪ್ರಮುಖ ಮುಖಂಡರನ್ನು ಬೇಟಿಯಾಗಲು ತೆರಳಿದ ಸಂದರ್ಭದಲ್ಲಿ ನಮ್ಮ ಕುಳಿತು ಕೊಳ್ಳಲು ಕುರ್ಚಿ ಕೊಡದೇ ಅವಮಾನ ಮಾಡಿದರು,341ನೇ ವಿಧಿ ಇದಕ್ಕೆ ಸಂಬಂದಿಸುವುದಿಲ್ಲ ಎಂದು ಉತ್ತರ ನೀಡಿದರು ಇದನ್ನು ಸವಾಲಾಗಿ ಸ್ವೀಕರಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿ ಸೂಕ್ತ ನ್ಯಾಯ ಪಡೆದಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಧರ್ಮಸೇನಾ,ಒಳ ಮೀಸಲಾತಿ ಹೋರಾಟಗಾರರಾದ ಗಡಂ ವೆಂಕಟೇಶ್, ಪಿ.ಮೂರ್ತಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ್ ಬೀಮಪ್ಪ, ಲಕ್ಷ್ಮೀ ನಾರಾಯಣಸ್ವಾಮಿ, ಆದಿ ಜಾಂಬವ ಸಮುದಾಯದ ಡಾ.ಬೀಮರಾಜು, ಸಿದ್ಧರಾಜು ಮತ್ತಿತರರು ಭಾಗವಹಿಸಿದ್ದರು.