Mysore
23
few clouds

Social Media

ಭಾನುವಾರ, 29 ಡಿಸೆಂಬರ್ 2024
Light
Dark

ಶಕ್ತಿ ಯೋಜನೆ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ಆರ್.‌ಅಶೋಕ್‌ ಕಿಡಿ

ಬೆಂಗಳೂರು: ಶಕ್ತಿ ಯೋಜನೆಯಿಂದಾಗಿ ರಾಜ್ಯ ಸರ್ಕಾರಕ್ಕೆ ಅಪಾರ ನಷ್ಟವಾಗಿದ್ದು, ಸಾರಿಗೆ ನೌಕರರು ಪ್ರತಿಭಟಿಸುತ್ತಿದ್ದಾರೆ. ನಾಮ ಹಾಕುವುದರಲ್ಲಿ ಕಾಂಗ್ರೆಸ್ಸಿಗರು ಪಳಗಿದವರು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಆರ್ಥಿಕ ನಷ್ಟದಲ್ಲಿದೆ. ಬಸವರಾಜ ರಾಯರೆಡ್ಡಿ ಅವರು ಹಲವು ಬಾರಿ ಹೇಳಿದರೂ ಸಿಎಂ ಸಿದ್ದರಾಮಯ್ಯ ಕೇಳಿಲ್ಲ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟು ಸಾರಿಗೆ ಇಲಾಖೆಗೆ ನಷ್ಟ ಉಂಟಾಗಿದೆ. ಸಾರಿಗೆ ನೌಕರರು ಧರಣಿ ಮಾಡುತ್ತಿದ್ದು, ಅವರಿಗೆ 4 ಸಾವಿರ ಕೋಟಿ ರೂ. ನೀಡಬೇಕು. ರೈತರಿಗೆ ಒಂದೂವರೆ ಸಾವಿರ ಕೋಟಿ ಸಬ್ಸಿಡಿ ನಾಮ ಹಾಕಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ನಾಮ ಹಾಕುವುದರಲ್ಲಿ ಕಾಂಗ್ರೆಸ್‌ನವರು ಪಳಗಿದವರು. ಹಾಗಾಗಿ ಈ ವರ್ಷ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮುಂದಿನ ವರ್ಷ ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿ 2 ಲಕ್ಷ ಕೋಟಿ ರೂ. ಸಾಲ ಮಾಡಿದರೆ ಕರ್ನಾಟಕ ಜನ್ಮದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದು ದೂರಿದರು.

ಇನ್ನು ಕರ್ನಾಟಕಕ್ಕೆ ಕೃಷ್ಣರಾಜಸಾಗರ ಅಣೆಕಟ್ಟನ್ನು ನೀಡಿದ ಮನೆತನದವರ ಹೆಸರನ್ನು ತೆಗೆದು ಕೆ.ಆರ್.ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಇಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹಾಗೇನಾದರೂ ಹೆಸರು ಇಡಬೇಕು ಎಂದಿದ್ದರೆ ಹೊಸ ರಸ್ತೆಯೊಂದನ್ನು ನಿರ್ಮಿಸಿ ಅವರ ಹೆಸರು ಅಥವಾ ಅವರ ಕುಟುಂಬದವರ ಹೆಸರನ್ನು ಇಡಲಿ. ಮಹಾರಾಜರ ಕುಟುಂಬ ಈ ನಾಡಿಗೆ ಸೇವೆ ಸಲ್ಲಿಸಿದೆ. ಅನ್ನ-ನೀರು ಕೊಟ್ಟಿದೆ. ಮಾರಿ ಕಣ್ಣು ಹೋರಿ ಮೇಲೆ ಎನ್ನುವಂತೆ ಆ ಕುಟುಂಬವನ್ನು ಗುರಿ ಮಾಡಬಾರದು. ಸಿಎಂ ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು, ಅವರು ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆಂದರೆ ಜನರಿಗೆ ಅವರ ಬಗ್ಗೆ ಇರುವ ಭಾವನೆ ಬದಲಾಗುತ್ತದೆ ಎಂದರು.

Tags: