ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ ಹಾಗೂ ಕೋಮು ಸೌಹಾರ್ದತೆ ಕದಡುವ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಆಂಟಿ ಕಮ್ಯುನಲ್ ವಿಂಗ್ ಜಾರಿಗೆ ಆದೇಶ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಈಗಾಗಲೇ ಆಂಟಿ ಕಮ್ಯುನಲ್ ಟಾಸ್ಕ್‌ಫೋರ್ಸ್ ರಚನೆಯಾಗಿತ್ತು. ಆಂಟಿ ಕಮ್ಯುನಲ್ ವಿಂಗ್ ಜಾರಿಗೆ ಆದೇಶ ನೀಡಲಾಗಿದೆ. ಪ್ರತಿಬಾರಿ ಘಟನೆ ನಡೆದಾಗಲೂ ಕಣ್ಮುಚ್ಚಿ ಕುಳಿತುಕೊಳ್ಳಲು ಆಗಲ್ಲ. ಕಳೆದ ಬಾರಿ ಹತ್ಯೆ ಘಟನೆ ನಡೆದಾಗ ನಾನು ಅಲ್ಲಿಗೆ ಹೋಗಿದ್ದೆ. ಆಗಲೇ ಆಂಟಿ ಕಮ್ಯುನಲ್ ಟಾಸ್ಕ್‌ಫೋರ್ಸ್ ರಚನೆ ಬಗ್ಗೆ ಹೇಳಿದ್ದೆ. ಇದೀಗ ಆಂಟಿ ಕಮ್ಯುನಲ್ ವಿಂಗ್ ತಕ್ಷಣ ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಂಗಳೂರಿನಲ್ಲಿ ನಡೆದಿರುವ ಘಟನೆಯಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕೋಮುಗಲಭೆ, ಕಾನೂನು ಸುವ್ಯವಸ್ಥೆ ಹದಗೆಡಿಸುವ ಘಟನೆ ನಡೆದಲ್ಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.





