ಉಡುಪಿ: ಸರ್ಕಾರ ಧರ್ಮಸ್ಥಳದ ಜೊತೆಗೆ ಇರುತ್ತದೆ. ಅನಾಮಿಕ ನೂರಾರು ಕಲ್ಪನೆಯ ಕಥೆ ಹೇಳುತ್ತಿದ್ದಾನೆ. ಸರ್ಕಾರದ ದಿಕ್ಕು ತಪ್ಪಿಸಿದವರನ್ನು ನಾವು ಬಿಡುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಈ ಕುರಿತು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಬಹಳ ಪವಿತ್ರವಾದದ್ದು. ಅಲ್ಲಿಗೆ ಮಸಿ ಬಳಿಯುವ ಯತ್ನ ನಡೆಯುತ್ತಿದೆ. ಗುಂಡಿ ಮೇಲೆ ಗುಂಡಿ ತೋಡಿದರೂ, ಬೆಟ್ಟ ಅಗೆದರು ಇಲಿಯೂ ಸಿಗಲಿಲ್ಲ. ಸರ್ಕಾರ ಧರ್ಮಸ್ಥಳದ ಜೊತೆಗೆ ಯಾವತ್ತೂ ಇರುತ್ತದೆ ಎಂದರು.
ಧರ್ಮಸ್ಥಳದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳಿನ ಮಹಲ್ ಕಟ್ಟಿದರು. ಆಗ ಆರೋಪ ಮಾಡಿದ್ದು ಇದೇ ಬಿಜೆಪಿ. ಈಗ ಗೋಸುಂಬೆ ಕಣ್ಣೀರು ಹಾಕುತ್ತಿರುವುದೇ ಇದೇ ಬಿಜೆಪಿಯೇ. ರಾಜ್ಯ, ದೇಶ, ವಿದೇಶದಲ್ಲೂ ಈ ವಿಚಾರ ಚರ್ಚೆಯಾಯಿತು. ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿದವರಿಗೆ ಶಿಕ್ಷೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಸಾವಿರ ಮಾತನಾಡಬಹುದು. ಆದರೆ ಮುಸುಕುಧಾರಿಯ ಹಿಂದೆ ಇದೆ. ಎಲ್ಲರ ನಾಟಕ, ದೊಂಬರಾಟ ಮುಗಿಯಲಿ ಎಂದು ಎಸ್‌ಐಟಿ ರಚನೆ ಮಾಡಲಾಗಿದೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.





