Mysore
20
overcast clouds

Social Media

ಬುಧವಾರ, 28 ಜನವರಿ 2026
Light
Dark

ಮತಗಳ್ಳತನ ಆರೋಪ | ನ್ಯಾಯಾಂಗ ಆಯೋಗ ರಚನೆಗೆ ಸರ್ಕಾರದ ಚಿಂತನೆ

ಬೆಂಗಳೂರು : ಚುನಾವಣಾ ಅಕ್ರಮಗಳ ಬಗ್ಗೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‍ಗಾಂಧಿ ಅವರ ಗಂಭೀರ ಆರೋಪ ಕುರಿತಂತೆ ತನಿಖೆ ನಡೆಸಲು ಎಸ್‍ಐಟಿ ಅಥವಾ ನ್ಯಾಯಾಂಗ ಆಯೋಗ ರಚನೆಯ ಬಗ್ಗೆ ರಾಜ್ಯಸರ್ಕಾರ ಚಿಂತನೆ ನಡೆಸಿದೆ.

ಶುಕ್ರವಾರ ಫ್ರೀಡಂಪಾರ್ಕ್‍ನಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ರಾಹುಲ್‍ಗಾಂಧಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವ್ಯಾಪ್ತಿಯ ಮಹದೇವಪುರ ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪಗಳ ಕುರಿತು ತನಿಖೆ ನಡೆಸುವಂತೆ ರಾಜ್ಯಸರ್ಕಾರಕ್ಕೆ ಸಲಹೆ ನೀಡಿದ್ದರು.

ವಿಧಾನಸಭೆ ಚುನಾವಣೆಗೂ ಮುನ್ನ ಚಿಲುಮೆ ಟ್ರಸ್ಟ್ ವತಿಯಿಂದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಲೋಪಗಳ ಬಗ್ಗೆ ಒಂದು ಸುತ್ತಿನ ತನಿಖೆಯಾಗಿವೆ. ಅನಂತರವೂ ಮಹದೇವಪುರ ವಿಧಾನಸಭಾ ಕ್ಷೇತದಲ್ಲಿ ಲೋಕಸಭೆ ಚುನಾವಣಾ ವೇಳೆಗೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪಗಳಾಗಿವೆ ಎಂಬುದು ರಾಹುಲ್ ಗಾಂಧಿ ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ಕೇಂದ್ರ ಚುನಾವಣಾ ಆಯೋಗದ ಮಾರ್ಗ ದರ್ಶನದಲ್ಲಿ ಮತದಾರರರ ಪಟ್ಟಿ ಪರಿಷ್ಕರಣೆಯಾಗಿದ್ದರೂ ರಾಜ್ಯ ಸರ್ಕಾರದ ಅಧೀನದಲ್ಲಿರುವ ಬಿಬಿಎಂಪಿ ಅಧಿಕಾರಿಗಳು ಪರಿಷ್ಕರಣೆ ಮಾಡಿದ್ದಾರೆ. ರಾಜ್ಯ ಕಂದಾಯ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ.

ರಾಹುಲ್‍ಗಾಂಧಿ ಅವರ ಹೇಳಿಕೆ ಪ್ರಕಾರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಾಗಿರುವ ಲೋಪಗಳಿಗೆ ರಾಜ್ಯ ಸರ್ಕಾರವೂ ಹೊಣೆಯಾಗಬೇಕಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇನದ ಮೇರೆಗೆ ಪಟ್ಟಿ ಪರಿಷ್ಕರಣೆಯಾದರೂ ಆ ಜವಾಬ್ದಾರಿಯನ್ನು ನಿಭಾಯಿಸುವವರು ಮಾತ್ರ ರಾಜ್ಯಸರ್ಕಾರದ ಅಧಿಕಾರಿಗಳೇ ಆಗಿರುತ್ತಾರೆ. ರಾಹುಲ್‍ಗಾಂಧಿ ಹುಮ್ಮಸ್ಸಿನಲ್ಲಿ ತನಿಖೆ ನಡೆಸುವಂತೆ ಫಾರ್ಮಾನು ಹೊರಡಿಸಿದ್ದಾರೆ. ತನಿಖೆ ನಡೆಸಿದ್ದೇ ಆದರೆ ಅದರ ಮೂಲ ತಲುಪುವುದು ರಾಜ್ಯ ಸರ್ಕಾರದ ಬುಡಕ್ಕೆ ಅಗಿದೆ. ಮೇಲಾಗಿ ಕೇಂದ್ರ ಚುನಾವಣಾ ಆಯೋಗದ ವ್ಯಾಪ್ತಿಯನ್ನು ಮೀರಿ ರಾಜ್ಯ ಸರ್ಕಾರ ತನಿಖೆ ನಡೆಸಲು ಸಾಧ್ಯವೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ರಾಹುಲ್ ಗಾಂಧಿ ಸೂಚನೆ ನೀಡಿರುವುದರಿಂದ ತನಿಖೆ ನಡೆಸಲೇ ಬೇಕಾದ ಇಕ್ಕಟ್ಟಿನ ಪರಿಸ್ಥಿತಿ ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ಹೀಗಾಗಿ ಯಾವುದಾದರೂ ಒಂದು ಸ್ವರೂಪದ ತನಿಖೆಯಾಗಬೇಕು. ಇಲ್ಲವಾದರೆ ಕಾಂಗ್ರೆಸ್ ಸರ್ಕಾರವೇ ರಾಹುಲ್ ಗಾಂಧಿ ಅವರ ಮಾತಿಗೆ ಮಾನ್ಯತೆ ನೀಡಲ್ಲ. ಆರೋಪದಲ್ಲಿ ಹುರುಳಿಲ್ಲ ಎಂಬ ಅಪಹಾಸ್ಯಗಳು ಕೇಳಿಬರುತ್ತವೆ.

ರಾಹುಲ್‍ಗಾಂಧಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ, ಟೀಕೆ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಆದರೆ ಆ ದೂರು ನಿಗದಿತ ಪ್ರಮಾಣ ಪತ್ರದ ಮಾದರಿಯಲಿಲ್ಲ ಎಂದು ಚುನಾವಣಾ ಆಯೋಗ ಹೇಳಿಕೆ ನೀಡಿದೆ. ಆಯೋಗದ ಧೋರಣೆಯನ್ನು ಗಮನಿಸಿದರೆ, ರಾಹುಲ್‍ಗಾಂಧಿ ಅವರ ಆರೋಪಗಳು ತನಿಖೆಯಾಗುವ ಸಾಧ್ಯತೆ ಕಡಿಮೆ ಇದೆ. ರಾಹುಲ್ ಗಾಂಧಿ ಟೀಕೆ ಮಾಡುವುದಕ್ಕಷ್ಟೇ ನಿಲ್ಲದೇ, ರಾಜ್ಯ ಸರ್ಕಾರದಿಂದ ತನಿಖೆಯಾಗಬೇಕೆಂಬ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಚುನಾವಣಾ ಆಯೋಗ ಸಾಂವಿಧಾನಿಕ ಸ್ಥಾನಮಾನ ಹೊಂದಿರುವುದರಿಂದ ರಾಜ್ಯ ಸರ್ಕಾರದ ಅಧಿಕಾರಿಗಳು ತನಿಖೆ ನಡೆಸಲು ಕಷ್ಟ ಸಾಧ್ಯವಾಗಲಿದೆ. ಹೀಗಾಗಿ ನ್ಯಾಯಾಂಗ ತನಿಖೆ ಸೂಕ್ತ ಎಂಬ ಚರ್ಚೆಗಳು ನಡೆಯುತ್ತಿವೆ. ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿ ಅದಕ್ಕೆ ಎಸ್‍ಐಟಿ ಮಾದರಿಯಲ್ಲಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ತನಿಖೆ ನಡೆಸಬಹುದು ಎಂಬ ಸಲಹೆಗಳಿವೆ.

ಈ ನಿಟ್ಟಿನಲ್ಲಿ ಸಾಧಕ-ಭಾದಕಗಳ ಬಗ್ಗೆ ವರದಿ ನೀಡುವಂತೆ ಹಿರಿಯ ಅಧಿಕಾರಿಗಳು ಕಾನೂನು ತಜ್ಞರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Tags:
error: Content is protected !!