ಬೆಂಗಳೂರು: ಕಾಂಗ್ರೆಸ್ ಸರ್ಕಾರ ತಮ್ಮ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯದಲ್ಲಿ ಅಗತ್ಯ ವಸ್ತುಗಳ ಮೇಲೆ ದರ ಏರಿಕೆ ಹಾಗೂ ಕೆಲವು ಟೆಂಡರ್‌ಗಳಲ್ಲಿ ಅಕ್ರಮ ಮಾಡುತ್ತಿದ್ದಾರೆ ಎಂದು ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಏಪ್ರಿಲ್.6 ) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಸರ್ಕಾರ ಸ್ಮಾರ್ಟ್ ಮೀಟರ್‌ಗಳನ್ನೇ ಬಿಟ್ಟಿಲ್ಲ. ಕಸವನ್ನೂ ಬಿಡುತ್ತಾರಾ? ಅಲ್ಲದೇ ರಾಜ್ಯದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳ ನೋಂದಣಿ ಶುಲ್ಕವನ್ನು ಹೆಚ್ಚಳ ಮಾಡಿದ್ದಾರೆ. ಇನ್ನೂ ಪೋಸ್ಟ್ ಮಾರ್ಟಂಗೂ ದರ ಏರಿಕೆ ಮಾಡಬೇಕು ಅಷ್ಟೇ. ಒಂದು ವೇಳೆ ಸರ್ಕಾರ ಹಾಗೇನಾದರೂ ಮಾಡಿದರೆ ರಾಜ್ಯದ ಜನತೆ ಸಾಯೋದಕ್ಕೂ ಹಿಂಜರಿಯುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಒಬ್ಬರನ್ನು ಹತ್ಯೆ ಮಾಡಿ ರಾಜಕಾರಣ ಮಾಡುತ್ತದೆ. ಈ ಹಿಂದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಹಾಗೂ ರೋಹಿತ್ ವೇಮುಲ ವಿಚಾರದಲ್ಲಿ ಮಾಡಿದ ನಿಮ್ಮ ರಾಜಕಾರಣ, ಅಪಪ್ರಚಾರ ಯಾವ ಸೀಮೆಯದು? ಈಗಲೂ ಅದೇ ರೀತಿ ವಿನಯ್ ಸಾವಿನಲ್ಲೂ ಅಪಪ್ರಚಾರ ಮಾಡುತ್ತಿದ್ದೀರಿ. ಹಾಗಾದರೇ ವಿನಯ್ ಸೋಮಯ್ಯ ಡೆತ್ ನೋಟ್ ಬರೆದಿದ್ದು ಸುಳ್ಳಾ? ಕಾಂಗ್ರೆಸ್ ಸುಳ್ಳು ಆರೋಪ ಮಾಡುವ ಮೂಲಕ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.





