ಬೆಂಗಳೂರು: ಸದ್ಯ ಬೆಂಗಳೂರಿನ ಜನ ನಿತ್ಯ ಟ್ರಾಫಿಕ್ ಕಿರಿಕಿರಿಯಿಂದ ಬಳಲುತ್ತಿದ್ದಾರೆ. ಟ್ರಾಫಿಕ್ ನಿಂದ ಬಳಲುವವರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿಗೆ ಮುಂಬರುವ 2026 ಕ್ಕೆ ಎಲೆಕ್ಟ್ರಿಕಲ್ ಏರ್ ಟ್ಯಾಕ್ಸಿ ಸೇವೆ ಆಂರಭವಾಗಲಿದೆ.
ಹೌದು. ಇಂಡಿಗೋದ ಪ್ರವರ್ತಕ ಸಮೂಹದ ಇಂಟರ್ಗ್ಲೋಬ್ ಎಂಟರ್ ಪ್ರೈಸಸ್ ಸಂಸ್ಥೆ ಏರ್ ಟ್ಯಾಕ್ಸಿ ಸೇವೆ ಆರಂಭಿಸಲು ನಿರ್ಧರಿಸಿದೆ. ಅದರಂತೆ ಇಂಟರ್ಗ್ಲೋಬ್ ಸಂಸ್ಥೆ ಹಾಗೂ ಅಮೆರಿಕಾದ ಮೂಲಕ ಆರ್ಚರ್ ಏವಿಯೇಷನ್ ಸಂಸ್ಥೆಗಳು ಬೆಂಗಳೂರಿನಲ್ಲಿ ಮ್ಯಾಪಿಂಗ್ ಕಾರ್ಯ ನಡೆಸುತ್ತಿವೆ.
ಮೊದಲ ಹಂತದಲ್ಲಿ ದೆಹಲಿಯಲ್ಲಿ ಏರ್ ಟ್ಯಾಕ್ಸಿ ಸೇವೆ ಆರಂಭಿಸಲಾಗುತ್ತಿದ್ದು, ನಂತರ ಸಿಲಿಕಾನ್ ಸಿಟಿಗೂ ಸೇವೆ ವಿಸ್ತರಿಸಲಿದೆ. ಸರ್ಜಾಪುರ, ಐಟಿಪಿಎಲ್, ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಏರ್ ಟ್ಯಾಕ್ಸಿ ನಿಲ್ದಾಣಗಳ ಗುರುತು ಕಾರ್ಯ ನಡೆಸಲಾಗುತ್ತಿದೆ. ಡ್ರೋಣ್ ಮಾದರಿಯಲ್ಲಿರುವ ಏರ್ ಟ್ಯಾಕ್ಸಿ ಸೇವೆ ಆರಂಭಿಸಲಾಗುವುದು ಎಂದು ಇಂಡಿಗೋ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏರ್ ಟ್ಯಾಕ್ಸಿ ನಿಲ್ದಾಣ ಹಾಗೂ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಪ್ರದೇಶಗಳ ಗುರುತು ಹಾಕಲಾಗಿದ್ದು, ಏರ್ ಪೋರ್ಟ್‌ಗೆ ಏರ್ ಟ್ಯಾಕ್ಸಿಯಲ್ಲಿ ತೆರಳುವವರಿಗೆ 2 ಸಾವಿರದಿಂದ 2500 ರೂಪಾಯಿ ದರ ನಿಗದಿಪಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.