Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿ : ಕೈಜೋಡಿಸಿ ಮನವಿ ಮಾಡಿದ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ !

ನವದೆಹಲಿ :  ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿಗಳನ್ನು ʼಸೋ ಕಾಲ್ಡ್‌ ಗ್ಯಾರಂಟಿಗಳುʼ ಎಂದು ಕಟುವಾಗಿ ಟೀಕಿಸಿದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು; ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಇಂಥ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ಅನಗತ್ಯ ವೆಚ್ಚದ ಅನುತ್ಪಾದಕ, ಅಲ್ಪಾವಧಿ ಲಾಭದ ಗ್ಯಾರಂಟಿಗಳು ಇವಾಗಿವೆ ಎಂದು ಕಾಂಗ್ರೆಸ್‌ ಸರಕಾರದ ಪಂಚ ಗ್ಯಾರಂಟಿಗಳ ಬಗ್ಗೆ ದೇಶದ ಜನರ ಗಮನ ಸೆಳೆದರು.

ಕಾಂಗ್ರೆಸ್‌ ಪಕ್ಷದ ಸದಸ್ಯರ ಆಕ್ಷೇಪಣೆ, ಗದ್ದಲದ ನಡುವೆಯೂ ತಮ್ಮ ಮಾತುಗಳನ್ನು ಮುಂದುವರಿಸಿದ ಅವರು; ಜಂತರ್‌ಮಂತರ್‌ನಲ್ಲಿ ಕಾಂಗ್ರೆಸ್‌ನವರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಅವರು ನನ್ನನ್ನೂ ಸೇರಿ ಎಲ್ಲರನ್ನೂ ಬರುವಂತೆ ಕರೆದಿದ್ದಾರೆ.

ಈ ದೇಶದ ರಾಜಕೀಯ ಪರಿಸ್ಥಿತಿ ಹೇಗಾಗಿದೆ ಎಂದರೆ, ರಾಜಕೀಯ ಲಾಭಕ್ಕಾಗಿ ಅನಗತ್ಯ ವೆಚ್ಚದ ಅನುತ್ಪಾದಕ ವೆಚ್ಚಗಳನ್ನು ಯಥೇಚ್ಛವಾಗಿ ಮಾಡಲಾಗುತ್ತಿದೆ. ನಾನೆಂದೂ ಇಂಥದ್ದನ್ನು ಮಾಡಿಲ್ಲ ಎಂದರು.

ಮೋದಿ ಗ್ಯಾರಂಟಿ ವಿಭಿನ್ನ, ನನಗೆ ಗೊತ್ತಿದೆ: ಈ ಸಂದರ್ಭದಲ್ಲಿ ಕಾಂಗ್ರೆಸ್‌ ಸದಸ್ಯರೊಬ್ಬರು ಮೋದಿ ಗ್ಯಾರಂಟಿಗಳ ಬಗ್ಗೆ ಏನು ಹೇಳುತ್ತೀರಿ ಎಂದಾಗ, “ನಾನು ಹೇಳುತ್ತಿರುವುದು ಕರ್ನಾಟಕ ಸರಕಾರದ ಗ್ಯಾರಂಟಿಗಳ ಬಗ್ಗೆ.

ಮೋದಿ ಗ್ಯಾರಂಟಿಗಳು ಬಹಳ ವಿಭಿನ್ನವಾಗಿವೆ. ಅವುಗಳ ಬಗ್ಗೆ ನನಗೆ ಗೊತ್ತಿದೆ” ಎಂದು ಗುಡುಗಿದರು. ಅಲ್ಲದೆ; “ನಾನು ತಪ್ಪು ಮಾಹಿತಿ ಹೇಳಿದ್ದರೆ ಕ್ಷಮೆ ಕೇಳುತ್ತೇನೆ.

ಯಾರಿಗೂ, ಯಾವುದಕ್ಕೂ ಅಪಖ್ಯಾತಿ ತರುವ ಉದ್ದೇಶ ನನ್ನದಲ್ಲ. ಕರ್ನಾಟಕ ಸರಕಾರ ಒಳ್ಳೆಯದು ಮಾಡಿದರೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ನನಗೆ ಅದರಿಂದ ಏನೂ ಆಗಬೇಕಿಲ್ಲ” ಎಂದರು ಅವರು.

ಹಣ ಇಲ್ಲ, ಪ್ರತಿಭಟನೆ ಮಾಡುತ್ತೇವೆ ಎಂದು ನಮ್ಮನ್ನೆಲ್ಲ ಕರೆಯುತ್ತಾರೆ. ಆದರೆ, ಕೇರಳದಲ್ಲಿ ಇದೇ ಉದ್ದೇಶಕ್ಕೆ ಅಲ್ಲಿನ ಎಲ್ ಡಿಎಫ್ ಸರಕಾರ ಕರೆದರೆ ಕಾಂಗ್ರೆಸ್ ನವರು ಬಹಿಷ್ಕಾರ ಹಾಕುತ್ತಾರೆ. ಇದು ರಾಜಕೀಯ ಪರಿಸ್ಥಿತಿ ಎಂದು ಅವರು ಬೇಸರಿಸಿದರು.

ಮನ ಕಲಕುವ ಘಟನೆ ವಿವರಿಸಿದ ಮಾಜಿ ಪ್ರಧಾನಿಗಳು: ಗ್ಯಾರಂಟಿಗಳ ಹೆಸರಿನಲ್ಲಿ ಕರ್ನಾಟಕದಲ್ಲಿ ಏನಾಗಿದೆ? ಒಂದು ಘಟನೆ ಬಗ್ಗೆ ವಿವರಿಸುತ್ತೇನೆ. “ಹಾವೇರಿ ಜಿಲ್ಲೆ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ ಎಂಬ ಯುವಕನ ಆತ್ಮಾಹುತಿ ಆಘಾತಕಾರಿ.

ನಿಮ್ಮ ಪ್ರಚಾರಪ್ರಿಯ, ಖೊಟ್ಟಿ ಗ್ಯಾರಂಟಿಗಳ ಸರಕಾರದ ಆತ್ಮಸಾಕ್ಷಿಗೆ ಎದುರಾದ ದೊಡ್ಡ ಸವಾಲು” ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಡಿದ್ದ ಟ್ವೀಟ್‌ʼನ ಒಂದು ತುಣುಕನ್ನು ಓದಿದರು ಹಾಗೂ ಆ ಬಗ್ಗೆ ವರದಿ ಮಾಡಿದ್ದ ಪತ್ರಿಕೆಯ ತುಣುಕನ್ನು ಪ್ರದರ್ಶಿಸಿದರು. “ಆ ಯುವಕ ಕೆಲಸಕ್ಕಾಗಿ ತಾಯಿಯೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿರುತ್ತಾನೆ.

ಟಿಕೆಟ್ ಇಲ್ಲದ ಕಾರಣಕ್ಕೆ ಅವರಿಬ್ಬರನ್ನು ಧಾರವಾಡದ ಬಳಿ ಕೆಳಗಿಳಿಸಲಾಗುತ್ತದೆ. ಅಲ್ಲಿ ತಾಯಿ ಮತ್ತು ತನಗೆ ಊಟಕ್ಕಾಗಿ ಆ ಯುವಕ ಅಲೆಯುತ್ತಾನೆ. ಕೆಲಸ ಹುಡುಕುತ್ತಾನೆ.

ಸಿಗುವುದಿಲ್ಲ. ಕೊನೆಗೆ ಆ ನತದೃಷ್ಟ ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದು, ಕರ್ನಾಟಕದ ಗ್ಯಾರಂಟಿಗಳ ನೈಜಸ್ಥಿತಿ” ಎಂದು ಮಾಜಿ ಪ್ರಧಾನಿಗಳು ಅತೀವ ಬೇಸರ ವ್ಯಕ್ತಪಡಿಸಿದರು.

ನಾನು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ ಒಬ್ಬ ಶಾಸಕರನ್ನೂ ನಿಗಮ ಮಂಡಳಿಗಳಿಗೆ ನೇಮಕ ಮಾಡಲಿಲ್ಲ. ಜನರ ತೆರಿಗೆ ಹಣದ ಪ್ರತಿ ಪೈಸೆಯನ್ನೂ ನೀರಾವರಿ ಯೋಜನೆಗಳಿಗೆ ತೆಗೆದಿಟ್ಟೆ.

ಜನರನ್ನು ದುಡ್ಡಿನಲ್ಲಿ ಒಂದು ಪೈಸೆಯನ್ನೂ ಅನಗತ್ಯವಾಗಿ ವೆಚ್ಚ ಮಾಡಲಿಲ್ಲ. ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಹಾಗೆಯೇ ಕೆಲಸ ಮಾಡಿದ್ದೇನೆ ಎಂದು ಅವರು ಸದನದಲ್ಲಿ ಒತ್ತಿ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ