ಬೆಂಗಳೂರು: ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಏರಿಕೆಯ ಬೆನ್ನಲ್ಲೇ ಇದೀಗ ಆಟೋರಿಕ್ಷಾ ಪ್ರಯಾಣ ದರ ಕೂಡ ಏರಿಕೆ ಮಾಡಬೇಕೆಂದು ಕೆಲ ಆಟೋ ಚಾಲಕ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಮಾಡಿವೆ.
ಸಾರಿಗೆ ನಿಗಮಗಳ ನಷ್ಟ ತುಂಬಿಸಲು ರಾಜ್ಯ ಸರ್ಕಾರ ಬಸ್ ಟಿಕೆಟ್ ಪ್ರಯಾಣ ದರವನ್ನು 7 ರೂಪಾಯಿಂದ 115 ರವರೆಗೆ ದರ ಏರಿಕೆ ಮಾಡಿದೆ. ಈ ನಡುವೆ ಆಟೋರಿಕ್ಷಾ ಪ್ರಯಾಣದ ದರವನ್ನು ಏರಿಸುವಂತೆ ಮನವಿ ಮಾಡಿದ್ದಾರೆ.
ಆಟೋರಿಕ್ಷಾ ಪ್ರಯಾಣ ದರ 1 ಕಿಲೋ ಮೀಟರ್‌ಗೆ 5 ರೂಪಾಯಿ 2 ಕಿಲೋ ಮೀಟರ್‌ಗೆ 10 ರೂಪಾಯಿ ಏರಿಕೆ ಮಾಡುವಂತೆ ಮನವಿ ಮಾಡಿವೆ. ಸದ್ಯ ಆಟೋರಿಕ್ಷಾ ಪ್ರಯಾಣ ದರ ಕಿಲೋಮೀಟರ್‌ಗೆ 30 ರೂಪಾಯಿ ಇದೆ. ಇದೀಗ 40ಕ್ಕೆ ಏರಿಸುವಂತೆ ಕೋರಿವೆ.
ದರ ಏರಿಕೆ ಸಂಬಂಧ ಇದೇ ತಿಂಗಳ ಮೂರನೇ ವಾರದಲ್ಲಿ ಸಭೆ ನಡೆಯಲಿದ್ದು, ಪ್ರಯಾಣದ ದರ ಏರಿಕೆ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಆಗಲಿದೆ.
ಈ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ- ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ, ಜಯನಗರ ಆರ್‌ಟಿಓ ಕಚೇರಿಯ ಓರ್ವ ಅಧಿಕಾರಿ-ಕಾರ್ಯದರ್ಶಿ ಹಾಗೂ ಟ್ರಾಫಿಕ್ ಡಿಸಿಪಿ, ಗ್ರಾಹಕರ ವೇದಿಕೆಯಿಂದ ಓರ್ವ ಅಧಿಕಾರಿ ಕಮಿಟಿ ಸದಸ್ಯರು ಇರಲಿದ್ದಾರೆ.