ಬೆಂಗಳೂರು : ದುಬೈಯಿಂದ ಬೆಂಗಳೂರಿಗೆ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಅವರಿದ್ದ ಫ್ಲ್ಯಾಟ್ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನ ಹಾಗೂ ನಗದು ವಶಪಡಿಸಿಕೊಂಡಿದ್ದೇವೆ. ಸದ್ಯ ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ವರ್ಗಾವಣೆ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲೇ ಒಂದೇ ಪ್ರಕರಣದಲ್ಲಿ ಇಷ್ಟೊಂದು ಅಪಾರ ಪ್ರಮಾಣದ ಚಿನ್ನವನ್ನು ಮೊದಲ ಬಾರಿಗೆ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಫ್ಲ್ಯಾಟ್‌ನಲ್ಲಿಯೂ ಕೂಡ ಅಪಾರ ಪ್ರಮಾಣದ ನಗದು ಸಿಕ್ಕಿದ್ದು ಪ್ರಕರಣವನ್ನು ಜಾರಿ ನಿರ್ದೇಶನಾಲಯಯಕ್ಕೆ ವರ್ಗಾಯಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
15 ದಿನದಲ್ಲಿ ನಾಲ್ಕು ಬಾರಿ ದುಬೈಗೆ
ಒಂದು ವರ್ಷದಲ್ಲಿ ರನ್ಯಾ ರಾವ್ ಅವರು 10ಕ್ಕೂ ಹೆಚ್ಚು ಬಾರಿ ದುಬೈಗೆ ಹೋಗಿ ಬಂದಿದ್ದಾರೆ. ಪ್ರತಿ ಬಾರಿ ಬಂದಾಗಲೂ ಚಿನ್ನವನ್ನು ಕಳ್ಳ ಸಾಗಣೆ ಮೂಲಕ ತಂದಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಸೋಮವಾರ ತಪಾಸಣೆ ನಡೆಸಿದಾಗ ರನ್ಯಾ ರಾವ್ ಅವರು ಹೆಚ್ಚಿನ ಚಿನ್ನಭರಣಗಳನ್ನು ಧರಿಸಿದ್ದರು. ಉಳಿದ ಚಿನ್ನವನ್ನು ಬಟ್ಟೆಯಲ್ಲಿ ಬಚ್ಚಿಟ್ಟುಕೊಂಡಿದ್ದರು ಎಂದು ಡಿಆರ್‌ಐ ಮೂಲಗಳು ತಿಳಿಸಿವೆ.





