ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೊಮ್ಮೆ ಜೈಲು ಸೇರಿದ್ದಾರೆ. ಈ ಬಾರಿ ಅವರ ಜೈಲು ವಾಸ ತುಸು ಸುದೀರ್ಘವಾಗಿಯೇ ಇರಲಿದೆ. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನೂ ಕೆಲ ಆರೋಪಿಗಳ ಜಾಮೀನು ರದ್ದಾಗಿದ್ದು ಎಲ್ಲರೂ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಗುರುವಾರ ರಾತ್ರಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಜೈಲು ಸೇರಿದ ಎರಡೇ ದಿನಕ್ಕೆ ಜೈಲಿನಿಂದಲೇ ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ದರ್ಶನ್ ರವಾನಿಸಿದ್ದಾರೆ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ದರ್ಶನ್ ಕಳಿಸಿರುವ ಸಂದೇಶವನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಅದರ ಪೂರ್ಣ ಸಾರಂಶ ಹೀಗಿದೆ….
‘ಎಲ್ಲರಿಗು ನಮಸ್ಕಾರ, ನಾನು ವಿಜಯಲಕ್ಷ್ಮಿ ದರ್ಶನ್. ನಿಮ್ಮ ಪ್ರೀತಿಯ ದರ್ಶನ್ ಅವರು ನಿಮಗೆ ಕಳಿಸಿರುವ ಸಂದೇಶ’ ಎಂದು ವಿಜಯಲಕ್ಷ್ಮಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಮುಂದುವರೆದು, ದರ್ಶನ್ ಅವರ ಸಂದೇಶವನ್ನು ಪ್ರಕಟಿಸಿದ್ದಾರೆ. ‘ಕನ್ನಡ ಕಲಾಭಿಮಾನಿಗೆ ಹಾಗೂ ನನ್ನ ಸೆಲೆಬ್ರಿಟಿಗಳಿಗೆ ಈ ನಿಮ್ಮ ಪ್ರೀತಿಯ ದಾಸನ ಶಿರ ಸಾಷ್ಟಾಂಗ ನಮಸ್ಕಾರಗಳು. ನನ್ನ ಸುಖದಲ್ಲಿ ಭಾಗಿಯಾಗಿ, ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತ ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಜೀವನ ಪರ್ಯಂತ ಆಭಾರಿ.
ನಾನು ಎಲ್ಲೆ ಇದ್ದರು ಹೇಗೆ ಇದ್ದರು ನಿಮ್ಮಗಳ ಶ್ರೇಯೋಭಿಲಾಷೆಯನ್ನೆ ಬಯಸುತ್ತೇನೆ. ಪ್ರಸಕ್ತ ವಿದ್ಯಮಾನ ಏನೇ ಇದ್ದರು, ನನ್ನ ನಂಬಿ ಕನಸು ಕಂಡಿರುವ ನಿರ್ದೇಶಕರ ಹಾಗು ನನ್ನ ಮೇಲೆ ಕೊಟ್ಯಂತರ ಹಣ ಹೂಡಿರುವ ನಿರ್ಮಾಪಕರ ಬೆಂಬಲವಾಗಿ ನಿಲ್ಲಬೇಕಾದ್ದು ನನ್ನ ಆದ್ಯ ಕರ್ತವ್ಯ , ಹಾಗಾಗಿ ನನ್ನ “ ದಿ ಡೆವಿಲ್ “ ಚಿತ್ರದ ಎಲ್ಲಾ ಕೆಲಸ ಕಾರ್ಯಗಳು ಯಾವುದೆ ಅಡೆತಡೆ ಇಲ್ಲದೆ ಸಾಗಲಿ ಎಂಬುಂದು ನನ್ನ ಆಶಯ, ಹಾಗಾಗಿ ಅದಕ್ಕೆ ನನ್ನ ಸಂಪೂರ್ಣಸಹಕಾರವಿದೆ ಎಂದು ಈ ಮೂಲಕ ತಿಳಿಸುತ್ತೇದ್ದೇನೆ. ಹಾಗು ಇದಕ್ಕೆ ನನ್ನ ಸೆಲೆಬ್ರಿಟಿಗಳ ಸಹಮತವಿದೆಯೆಂದು ಧೃಡವಾಗಿನಂಬಿದ್ದೇನೆ. ಸಿನಿಮಾ ಒಂದು ಮನರಂಜನೆಯ ಮಾಧ್ಯಮ ಅದನ್ನ ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ನೋಡಬೇಕು. ನಿಮ್ಮ ಪ್ರೀತಿಯ ದಾಸ’ ಎಂದು ದರ್ಶನ್ ಸಂದೇಶ ನೀಡಿದ್ದಾರೆ.





