ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಜೈಲಿಗೆ ಹಾಸಿಗೆ, ಮನೆಯೂಟ ಹಾಗೂ ಕೆಲವು ಬೇಡಿಕೆಯನ್ನು ಪೂರೈಸುವಂತೆ ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ.
ಜೈಲಿನ ಊಟದಲ್ಲಿ ವಾಂತಿ ಭೇದಿಯಾಗುತ್ತಿದೆ, ಮನೆಯಿಂದ ಊಟ, ಹಾಸಿಗೆ ಹಾಗೂ ಕೆಲವು ಪುಸ್ತಕಗಳನು ತರಿಸಲು ಅವಕಾಶ ಮಾಡಿಕೊಡಿ ಎಂದು ನಟ ದರ್ಶನ್ ನಿನ್ನೆ(ಜು.9)ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದರು. ಅರ್ಜಿಯನ್ನು ಇಂದು(ಜು.10) ವಿಚಾರಣೆ ನಡೆಸಿದ ನ್ಯಾ.ಎಸ್ ಆರ್ ಕೃಷ್ಣಕುಮಾರ್ ಅವರಿದ್ದ ಪೀಠ ವಿಚಾರಣೆಯನ್ನು ಜುಲೈ 18 ಕ್ಕೆ ಮುಂದೂಡಿ ಆದೇಶಿಸಿದೆ.
ನಟ ದರ್ಶನ್ ಪರ ವಾದ ಮಂಡಿಸಿದ ವಕೀಲ ಕೆ.ಎನ್ ಫಣೀಂದ್ರ ಜೈಲು ನಿಯಾಮವಳಿಗಳಲ್ಲಿ ಮನೆ ಊಟಕ್ಕೆ ಅವಕಾಶವಿದೆ. ಆದರೆ ದರ್ಶನ್‌ಗೆ ಅವಕಾಶ ನೀಡಿಲ್ಲ ಎಂದರು.
ಮನೆಯಿಂದ ಊಟ, ಹಾಸಿಗೆ ಹಾಗೂ ಪುಸ್ತಕ ಕೋರಿದ್ದೀರಿ. ಜೈಲು ಕೈಪಿಡಿಯಲ್ಲಿ ಮನೆ ಊಟದ ಬಗ್ಗೆ ನಿಯಮವಿದೆಯೇ, ಹಾಗೆಯೇ ಈ ಬಗ್ಗೆ ಹಿಂದೆ ಕೋರ್ಟ್ ತೀರ್ಪುಗಳಿವೆಯೇ. ನೀವು ಏನಾದರೂ ಜೈಲು ಅಧಿಕಾರಿಗಳನ್ನು ಮನವಿ ಮಾಡಿದ್ದೀರಾ? ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಎಸ್. ಆರ್ ಕೃಷ್ಣಕುಮಾರ್ ಅವರು ಕಾನೂನು ಅನುಸಾರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜೈಲು ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜುಲೈ 18 ಕ್ಕೆ ಮೂಂದೂಡಿ ಆದೇಶಿಸಿದರು.



