ಬೆಂಗಳೂರು: ಮರೆತು ಹೋದ ಭಾರತೀಯ ಆಹಾರ ಪದ್ದತಿಗಳನ್ನು ಪುನರ್ ಪರಿಚಯಿಸಿ ದೇಸಿ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ರಾಜ್ಯ ಸರ್ಕಾರ ಗಮನಹರಿಸಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು.
ನಗರದ ನಳಪಾಕ ಹೋಟೆಲ್ ನಲ್ಲಿ ಬೆಳ್ಳಿಹಬ್ಬದ ವರ್ಷಾಚರಣೆ ಸಂದರ್ಭದಲ್ಲಿ ಏರ್ಪಡಿಸಿದ್ದ ಸಂಕ್ರಾಂತಿ ಸವಿ ರುಚಿ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ಸಿರಿ ಧನ್ಯಾಗಳು ನಮ್ಮ ಆರೋಗ್ಯಕ್ಕೆ ಪೂರಕ . ಅದರ ಉತ್ತೇಜನಕ್ಕೆ ಜ. 23-25 ರ ವರಗೆ ಬೆಂಗಳೂರಿನ ಅರಮೆನೆ ಮೈದಾನದಲ್ಲಿ ಅಂತರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳ ಆಯೋಜಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಬೆಂಗಳೂರು ಸಂಪೂರ್ಣ ಕರ್ನಾಟಕದ ಪರಿಕಲ್ಪನೆಯ ನಗರ. ಇಲ್ಲಿ ಎಲ್ಲಾ ತರದ ತಿನಿಸು ಲಭ್ಯ. ಅದರೆ ನಮ್ಮ ಕರ್ನಾಟಕದ ಆಹಾರಗಳ ಸತ್ವ ಮತ್ತು ಸವಿಯನ್ನು ಉಣ ಬಡಿಸುತ್ತಾ 25 ವರ್ಷಕ್ಕೆ ಪಾದಾರ್ಪಣೆ ಮಾಡಿದ ನಳಪಾಕ ಹೋಟೆಲ್ ನ ಯಶಸ್ಸು ಅಭಿನಂದನೀಯ ಎಂದು ಪ್ರಶಂಸಿದರು.
ಸಂಕ್ರಾಂತಿ ರೈತರ ಸಂಭ್ರಮ ಹಂಚಿಕೆಯ ಸುಗ್ಗಿ ಹಬ್ಬ. ಈ ಬಾರಿ ಜ.14 ರಂದು ನಾಗಮಂಗಲ ಕ್ಷೇತ್ರದ ದೇವಲಾಪುರ ಗ್ರಾಮದಲ್ಲಿ ವಿಶೇಷ ಸಂಕ್ರಾಂತಿ ಕಾರ್ಯಕ್ರಮ ಆಯೋಜಿಸಿದ್ದು ರೈತಾಪಿ ಕುಟುಂಬದೊಂದಿಗೆ ಒಂದು ದಿನ ಕಾಲಕಳೆಯಲು ಬಯಸಿದ್ದೇನೆ ಎಂದು ಅವರು ತಿಳಿಸಿದರು.
ಶಾಸಕ ಗೋಪಾಲಯ್ಯ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.





