ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆಯಲ್ಲಿ ಆರೋಪಿ ದರ್ಶನ್ ಬಿಜಿಎಸ್ ಆಸ್ಪತ್ರೆಯಿಂದ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಲು ಸೆಷನ್ಸ್ ಕೋರ್ಟ್‌ಗೆ ಹಾಜರಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್.13 ರಂದು ಆರೋಪಿ ದರ್ಶನ್‌ಗೆ ಹೈಕೋರ್ಟ್ ಷರತ್ತು ಬದ್ಧ ರೆಗ್ಯುಲರ್ ಜಾಮೀನು ಮಂಜೂರು ಮಾಡಲಾಗಿದೆ ಎಂದು ಆದೇಶ ಹೊರಡಿತ್ತು. ಈ ಹಿನ್ನೆಲೆಯಲ್ಲಿ ಜಾಮೀನು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 57ನೇ ಸಿಸಿಎಚ್ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.
ಈ ಕುರಿತು ಇಂದು(ಡಿಸೆಂಬರ್.16) 57ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಾದ ಜೈಶಂಕರ್ ಜಾಮೀನು ಬಾಂಡ್ ಕುರಿತು ವಿಚಾರಣೆ ನಡೆಸಿದ್ದಾರೆ. ಬಳಿಕ ಆರೋಪಿ ದರ್ಶನ್ 1 ಲಕ್ಷ ಜಾಮೀನು ಬಾಂಡ್‌ಗೆ ಸಹಿ ಹಾಕಿದ್ದಾರೆ. ಇದೇ ವೇಳೆ ಶ್ಯೂರಿಟಿಯಾಗಿ ಈ ಹಿಂದೆ ಮಧ್ಯಂತರ ಜಾಮೀನಿಗಾಗಿ ಸಹಿ ಹಾಕಿದ್ದ ದರ್ಶನ್ ಸಹೋದರ ದಿನಕರ್ ತೂಗುದೀಪ ಹಾಗೂ ಆಪ್ತ ಧನ್ವೀರ್ ಅವರೇ ಇಂದು ಸಹ ಶ್ಯೂರಿಟಿದಾರರಾಗಿ ಸಹಿ ಹಾಕಿದ್ದಾರೆ.
ಇನ್ನು ಈ ವೇಳೆ ನ್ಯಾಯಾಧೀಶರಿಗೆ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ದರ್ಶನ್‌ಗೆ ಪಾಸ್‌ಪೋರ್ಟ್ ಹಿಂದಿರುಗಿಸಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದರ್ಶನ್‌ಗೆ ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ನ್ಯಾಯಾಧೀಶರು ಸೂಚನೆ ಹೊರಡಿಸಿದ್ದಾರೆ.





