ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ತಂದವರು ಎಸ್.ಎಂ.ಕೃಷ್ಣ ಎಂದು ಅಭಿಷೇಕ್ ಅಂಬರೀಷ್ ಹೇಳಿದ್ದಾರೆ.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ರಾಜಕೀಯ ಗಣ್ಯರು ಹಾಗೂ ಸಿನಿಮಾ ಕಲಾವಿದರು ಸಂತಾಪ ಸೂಚಿಸಿದ್ದಾರೆ.
ಅಭಿಷೇಕ್ ಅಂಬರೀಷ್ ಕೂಡ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅಭಿಷೇಕ್ ಅಂಬರೀಷ್ ಅವರು, ಎಸ್.ಎಂ.ಕೃಷ್ಣ ಅವರನ್ನು ಕಳೆದುಕೊಂಡಿದ್ದು ದೇಶಕ್ಕೆ ನಷ್ಟ ಎಂದು ಭಾವುಕರಾದರು.
ಉತ್ತಮವಾದ ರಾಜಕಾರಣಿ ಎಸ್.ಎಂ.ಕೃಷ್ಣ ಅವರನ್ನು ಕಳೆದುಕೊಂಡದ್ದು ದೇಶಕ್ಕೆ ದೊಡ್ಡ ಲಾಸ್. ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ತಂದವರು. ತಂದೆಯ ಜೊತೆಗಿನ ಕೃಷ್ಣ ಅವರ ಒಡನಾಟ ಹೇಳೋಕೆ ಆಗ ನಾನು ಚಿಕ್ಕವನಿದ್ದೆ. ಆದರೆ 1998ರಲ್ಲಿ ಮಂಡ್ಯ ಕಡೆ ಅವರೊಂದಿಗೆ ಕ್ಯಾಂಪೇನ್ ಮಾಡಿದ್ವಿ ಎಂದು ಹಳೆಯ ರಾಜಕೀಯ ನೆನಪುಗಳನ್ನು ಮೆಲುಕು ಹಾಕಿದರು.
ಇನ್ನು ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದ ವೇಳೆ ಬೆಂಗಳೂರು ಸಾಕಷ್ಟು ಬದಲಾಯಿತು. ಚಿತ್ರರಂಗಕ್ಕೂ ಅವರ ಕೊಡುಗೆ ಸಾಕಷ್ಟಿದೆ. ಕಲಾವಿದರ ಮೇಲೆ ಅವರು ಸಾಕಷ್ಟು ಕಾಳಜಿ ತೋರಿಸುತ್ತಿದ್ದರು ಎಂದು ಸ್ಮರಿಸಿದರು.





