ಬೆಳಗಾವಿ : ಹುಕ್ಕಾ ಬಾರ್ ಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ವಿಶೇಷ ಕಾನೂನು ರೂಪಿಸಲಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹುಕ್ಕಾ ಬಾರ್ ಗಳು ಜನರ ಮೇಲೆ ಅದರಲ್ಲೂ ವಿಶೇಷವಾಗಿ ಯುವಕರ ಮೇಲೆ ಪರಿಣಾಮ ಬೀರುತ್ತಿವೆ. ಆದರೆ ಅವರ ಬಗ್ಗೆ ಏನೂ ಮಾತನಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ರಾಮಮೂರ್ತಿಯವರು ಬೃಹತ್ ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ಹುಕ್ಕಾ ಬಾರ್ ಗಳು ನಾಯಿ ಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಅವರಿಗೆ ಯಾರು ಪರವಾನಗಿ ಕೊಟ್ಟಿದ್ದಾರೆ ಹೇಗೆ ಪಡೆದುಕೊಂಡಿದ್ದಾರೆ ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಹುಕ್ಕಾ ಬಾರ್ ನಲ್ಲಿ ಸಿಲಿಂಡರ್ ಸ್ಪೋಟಗೊಂಡ ಘಟನೆಯನ್ನೂ ಕೂಡ ಅವರು ಪ್ರಸ್ಥಾಪ ಮಾಡಿದ್ದಾರೆ. ಇದ್ದಕ್ಕೆ ಪ್ರತಿಕ್ರಿಯಿಸಿರುವ ಪರಮೇಶ್ವರ್ ಅವರು ಇದರ ಬಗ್ಗೆ ನನಗೆ ಮಾಹಿತಿ ಇದೆ. ಈ ರೀತಿಯ ಘಟನೆಗಳನ್ನು ತಡೆಗಟ್ಟಲು ಸರ್ಕಾರ ಕಾನೂನು ಕ್ರಮ ತರಲಿದೆ ಎಂದು ಹೇಳಿದ್ದಾರೆ. ಇದಕ್ಕೆ ದನಿಗೂಡಿಸಿದ ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್, ನಗರದಲ್ಲಿ ಹುಕ್ಕಾ ಬಾರ್ ಗಳು ಮಾರಕವಾಗುತ್ತಿವೆ. ಪಂಜಾಬ್ ರಾಜಸ್ಥಾನ ಮಧ್ಯಪ್ರದೇಶ, ಛತ್ತೀಸ್‌ಘಡ, ತಮಿಳುನಾಡು ಹಾಗೂ ಗುಜರಾತ್ ಸೇರಿದಂತೆ ಹತ್ತು ರಾಜ್ಯಗಳು ಹುಕ್ಕಾ ಬಾರ್ ಗಳನ್ನು ನಿಷೇಧ ಮಾಡಿವೆ. ನಮ್ಮಲ್ಲಿಯೂ ಕೂಡ ಅದೇ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ.





