Mysore
20
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಪ್ರಶಸ್ತಿ ಆಯ್ಕೆಗೆ ಹೊಸ ವ್ಯವಸ್ಥೆ ಜಾರಿಗೆ ತರಬೇಕಿದೆ : ಡಿಸಿಎಂ ಡಿಕೆಶಿ

ಬೆಂಗಳೂರು : ಸರ್ಕಾರ ನೀಡುವ ಪ್ರಶಸ್ತಿಗಳಿಗೆ ಅರ್ಜಿ ಹಾಕುವ ಪದ್ಧತಿ ನಿಲ್ಲಿಸಿ, ಪರಿಣಿತರ ಸಮಿತಿ ಮೂಲಕ ಆಯ್ಕೆ ಮಾಡುವ ವಿಧಾನದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಗಾಂಧಿಭವನದಲ್ಲಿ ಶನಿವಾರ ನಡೆದ ಸಂಸ್ಕೃತಿ ಸಂಗಮ- 23 ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದ ಅವರು,ಪ್ರಶಸ್ತಿ ಆಯ್ಕೆಗೆ ಹೊಸ ವ್ಯವಸ್ಥೆ ಜಾರಿಗೆ ತರಬೇಕಿದೆ. ಯಾವುದೇ ಪ್ರಶಸ್ತಿಯಾದರೂ ಅದಕ್ಕೆ ಗೌರವ ಇರಬೇಕು. ಯಾವುದೇ ಒತ್ತಡಕ್ಕೆ ಒಳಗಾಗಿ ಪ್ರಶಸ್ತಿ ನೀಡಬಾರದು. ರಾಜ್ಯೋತ್ಸವದಷ್ಟೇ ವರ್ಷದ ಸಂಖ್ಯೆಯ ಪ್ರಶಸ್ತಿ ನೀಡುವ ಆಲೋಚನೆಯಿದೆ ಎಂದು ತಿಳಿಸಿದರು.

ನಾವೀಗ ಒಂದು ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆನ್ಲೈನ್ ಅರ್ಜಿ ಕರೆದಿದ್ದೆವು. ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಜಾತಿ, ಜಿಲ್ಲಾವಾರು ಮತ್ತು ಎಲ್ಲಾ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು. ಎಲ್ಲವನ್ನು ಲೆಕ್ಕ ಹಾಕುವಾಗ, ಯಾರನ್ನು ಆಯ್ಕೆ ಮಾಡುವುದು, ಯಾರನ್ನು ಬಿಡುವುದು ಎನ್ನುವ ಸವಾಲು ನಮ್ಮ ಮುಂದಿದೆ ಎಂದರು.

ಪ್ರಸ್ತುತ ವರ್ಷದ ಪ್ರಶಸ್ತಿ ನೀಡಲು ಎಲ್ಲಾ ಕ್ಷೇತ್ರಗಳ 20-30 ತಜ್ಞರ ಸಮಿತಿ ಮಾಡಲಾಗಿದೆ. ಸರ್ಕಾರ ನೀಡುವ ಯಾವುದೇ ಪ್ರಶಸ್ತಿಯನ್ನು ಸಮಿತಿಯೇ ಪರಿಶೀಲನೆ ಮಾಡಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ಹಿಂದೆ ಕೆಲವು ಸಲ ಪ್ರಶಸ್ತಿ ಪುರಸ್ಕೃತರ ಸಂಖ್ಯೆ 200- 300 ಕ್ಕೆ ಮುಟ್ಟಿದ್ದಿದೆ ಎಂದು ಹೇಳಿದರು.

ಸರ್ಕಾರ ಮಾಡಲು ಆಗದೇ ಇರುವ ಕೆಲಸಗಳನ್ನು ಸಂಘ- ಸಂಸ್ಥೆಗಳು, ಮಠಗಳು ಮಾಡುತ್ತಿವೆ. ಅನೇಕ ಸಾಧಕರನ್ನು ಗುರುತಿಸಿ, ಸಮಾಜದ ಒಳಿತಿಗೆ ಕೆಲಸ ಮಾಡುತ್ತಿವೆ. ಇಲ್ಲಿ ನಾನೊಬ್ಬನೇ ಅಲ್ಲ, ನಮ್ಮ ಹಿರಿಯರನ್ನು ನೆನಪಿಸಿಕೊಳ್ಳಬೇಕು. ಅಧಿಕಾರ ಇರಲಿ, ಇಲ್ಲದಿರಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸಿ. ಸೋಮಶೇಖರ್ ಅವರು ಪತ್ನಿಯೊಟ್ಟಿಗೆ ಸೇರಿ ಮಾಡುತ್ತಿದ್ದಾರೆ. ದೇವರು ವರ, ಶಾಪ ಏನನ್ನೂ ಕೊಡುವುದಿಲ್ಲ, ಕೇವಲ ಅವಕಾಶ ಕೊಡುತ್ತಾನೆ. ಈ ಅವಕಾಶವನ್ನು ಸಿ.ಸೋಮಶೇಖರ್ ಅವರು ಸಮಾಜಮುಖಿ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ