Mysore
26
few clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಬಿಜೆಪಿ ನಾಯಕರಿಂದ ಬರ ಅಧ್ಯಯನ ಎಂಬ ಹೊಸ ನಾಟಕ : ದಿನೇಶ್ ಗುಂಡೂರಾವ್

ಬೆಂಗಳೂರು : ರಾಜ್ಯ ಬಿಜೆಪಿ ನಾಯಕರು ಬರ ಅಧ್ಯಯನ ಪ್ರವಾಸ ಎಂಬ ಹೊಸ ನಾಟಕ ಶುರುಮಾಡಿದ್ದಾರೆ. ಇಲ್ಲಿ ನಾಟಕ ಮಾಡುವ ಬದಲು ಬರ ಅಧ್ಯಯನ ತಂದಿಂದ ಕೇಂದ್ರಕ್ಕೆ ವರದಿ ಕೊಡಲು ಒತ್ತಾಯಿಸಬಹುದಲ್ಲವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ದಿನೇಶ್, ಬಿಜೆಪಿ ನಾಯಕರು ಬರ ಅಧ್ಯಯನ ಪ್ರವಾಸ ಎಂಬ ಹೊಸ ನಾಟಕ ಶುರುಮಾಡಿದ್ದಾರೆ. ಈ ಪ್ರವಾಸದಿಂದ ಬಿಜೆಪಿ ನಾಯಕರು ಏನು ಕಡಿದು ಕಟ್ಟೆ ಹಾಕಲಿದ್ದಾರೆ? ಈಗಾಗಲೇ ಕೇಂದ್ರದ ಅಧಿಕಾರಿಗಳ ತಂಡ ರಾಜ್ಯಕ್ಕೆ ಬಂದು ಬರ ಅಧ್ಯಯನ ಮಾಡಿ ಹೋಗಿದೆ. ಕೇಂದ್ರದ ತಂಡ ರಾಜ್ಯಕ್ಕೆ ಬಂದು ಹೋದದ್ದಷ್ಟೇ ಗೊತ್ತು. ಆದರೆ, ಈವರೆಗೂ ಬರದ ಬಗ್ಗೆ ಕೇಂದ್ರದ ತಂಡ ಏನು ವರದಿ ನೀಡಿದೆ ಎಂಬ ಸುಳಿವೇ ಇಲ್ಲ. ರಾಜ್ಯ ಬಿಜೆಪಿ ನಾಯಕರು ಇಲ್ಲಿ ಬರ ಪ್ರವಾಸದ ನಾಟಕ ಮಾಡುವ ಬದಲು ಕೇಂದ್ರಕ್ಕೆ ವರದಿ ಕೊಡುವಂತೆ ಒತ್ತಾಯಿಸಬಹುದಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರು ಬರ ಅಧ್ಯಯನ ಪ್ರವಾಸ ಮಾಡಿ ಏನು ವರದಿ ನೀಡಲಿದ್ದಾರೆ? ರಾಜ್ಯದಲ್ಲಿ ಬರ ಇದೆ ಎಂದು ವರದಿ ನೀಡುವರೋ ಅಥವಾ ಇಲ್ಲ ಎಂದು ವರದಿ ನೀಡುವರೋ? ರಾಜ್ಯ ಬಿಜೆಪಿ ನಾಯಕರೇನು ಜನಪರ ಕಾಳಜಿಯಿಂದ ಈ ಅಧ್ಯಯನ ಪ್ರವಾಸ ಮಾಡುತ್ತಿಲ್ಲ. ಬದಲಿಗೆ ಕಳೆದು ಹೋಗಿರುವ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬರ ಅಧ್ಯಯನ ಪ್ರವಾಸದ ಪ್ರಹಸನ ಮಾಡುತ್ತಿದ್ದಾರಷ್ಟೆ ಎಂದು ಕಿಡಿಕಾರಿದ್ದಾರೆ.

ಎನ್‌ಡಿಆರ್‌ಎಫ್‌ ನಿಯಮದ ಅನುಸಾರ ಕೇಂದ್ರ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಅದರೆ ಇಲ್ಲಿಯವರೆಗೂ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಯಾಕೆಂದರೆ ಮೋದಿ ಸರ್ಕಾರಕ್ಕೆ ಕರ್ನಾಟಕ ನೆನಪಾಗುವುದು ಚುನಾವಣಾ ಸಂದರ್ಭದಲ್ಲಿ ಮಾತ್ರ. ಕರ್ನಾಟಕ ಸಂಕಷ್ಟದಲ್ಲಿದ್ದಾಗಲೆಲ್ಲಾ ಕೇಂದ್ರ ಕೈ ಕೊಡುವುದು ಸಾಮಾನ್ಯ ಸಂಗತಿ. ಬಿಜೆಪಿ ನಾಯಕರು ಬರ ಅಧ್ಯಯನಕ್ಕಾಗಿ ರಾಜ್ಯ ಪ್ರವಾಸ ಮಾಡುವುದು ಬಿಟ್ಟು ದೆಹಲಿ ಪ್ರವಾಸ ಮಾಡಲಿ. ಆಗಲಾದರೂ ಕೇಂದ್ರ ಪರಿಹಾರ ಹಣ ಬಿಡುಗಡೆ ಮಾಡಬಹುದೇನೋ ಎಂದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!