ಬೆಂಗಳೂರು: ಆರು ಮಂದಿ ನಕ್ಸಲರ ಶರಣಾಗತಿಯಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರು ಮಂದಿ ನಕ್ಸಲೀಯರು ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜದ ಮುಖ್ಯವಾಹಿನಿಗೆ ಹಿಂದಿರುಗಿ ಬಂದಿರುವುದರಿಂದ ಒಳ್ಳೆಯ ಸಂದೇಶ ರವಾನೆಯಾಗಿದೆ ಎಂದರು.
ಶರಣಾದ ನಕ್ಸಲೀಯರಿಗೆ ಪರಿಹಾರ ಪ್ಯಾಕೇಜ್ ಕೊಡುವುದರಲ್ಲಿ ತಪ್ಪೇನೂ ಇಲ್ಲ. ಬಿಜೆಪಿ ಸರ್ಕಾರ ಇದ್ದರೂ ಇದನ್ನೇ ಮಾಡುತ್ತಿತ್ತು. ಇದು ಕೇಂದ್ರ ಸರ್ಕಾರದ ನೀತಿ ಕೂಡ ಆಗಿದೆ. ಇದರಲ್ಲಿ ರಾಜಕೀಯ ಮಾಡಲು ಹೋಗಬಾರದು ಎಂದರು.
ಬಿಜೆಪಿ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದೆ. ಯುಜಿಸಿ ನಿಯಮಾವಳಿಗಳಿಗೆ ತರಲು ಹೊರಟಿರುವ ಬದಲಾವಣೆಯಲ್ಲೂ ಇದೇ ಅಜೆಂಡಾ ಇದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ಯಾವ ಸಮಸ್ಯೆಯೂ ಇಲ್ಲ. ಬೆಳಗಾವಿಯಲ್ಲಿ ಸಂವಿಧಾನ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಇನ್ನು ಕೆಲ ಶಾಸಕರು ಸೇರಿಕೊಂಡು ಔತಣ ಮಾಡಿದ್ದರಲ್ಲಿ ತಪ್ಪೇನೂ ಇಲ್ಲ. ಸಚಿವರಾದ ಈಶ್ವರ್ ಖಂಡ್ರೆ ಅವರಾಗಲಿ, ನಾನಾಗಲಿ ಯಾರನ್ನೂ ಔತಣಕ್ಕೆ ಕರೆದಿಲ್ಲ. ಲಿಂಗಾಯತ ಶಾಸಕರ ಸಭೆಯನ್ನೂ ನಾವ್ಯಾರು ಕರೆದಿಲ್ಲ. ಡಿನ್ನರ್ ಪಾರ್ಟಿ ಬಗ್ಗೆ ಹೆಚ್ಚು ಮಾತನಾಡುವುದು ಅನಗತ್ಯ ಎಂದರು.





