ಬೆಂಗಳೂರು : ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂ ಪರಿಹಾರ ಧನ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಸರ್ಕಾರ ಪರಿಹಾರದ ಚೆಕ್ ಅನ್ನು ಸಿದ್ದಪಡಿಸಿದ್ದು, ಇಂದು (ಮಂಗಳವಾರ) ಮೈತ ಯೋಧನ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಲಾಗುವುದು.
ಸಿಎಂ ಸಿದ್ದರಾಮಯ್ಯ ಅವರು ಕ್ಯಾಪ್ಟನ್ ಪ್ರಾಂಜಲ್ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ನಂತರ ಧಣ ಸಹಾಯ ನೀಡುವುದಾಗಿ ಘೋಷಣೆ ಮಾಡಿದ್ದರು. ಪ್ರಜ್ವಲ್ ಅವರ ದೇಶ ಸೇವೆ ಅನನ್ಯ. ಸಮರ್ಪಣಾ ಭಾವವನ್ನು ಸ್ಮರಿಸುತ್ತಾ, ಗೌರವ ನಮನ ಸಲ್ಲಿಸುತ್ತೇನೆ ಎಂದಿದ್ದಾರೆ.
ಸಿಎಂ ಟ್ವೀಟ್ : ಈ ಬಗ್ಗೆ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ” ಜಮ್ಮು – ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದ ವೇಳೆ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರೂ. 50,00,000 ( ಐವತ್ತು ಲಕ್ಷ ) ಪರಿಹಾರಧನವನ್ನು ನಮ್ಮ ಸರ್ಕಾರದಿಂದ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ದೇಶ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಶ್ರಮಿಸುವ ಪ್ರತಿಯೊಬ್ಬ ಯೋಧನ ಬಗ್ಗೆ ನಮಗೆ ಅಪಾರ ಗೌರವವಿದೆ. ಹುತಾತ್ಮ ಯೋಧ ಪ್ರಾಂಜಲ್ ಅವರ ತ್ಯಾಗ, ಬಲಿದಾನಕ್ಕೆ ಬೆಲೆಕಟ್ಟಲಾಗದು, ಆದರೆ ದೇಶದ ಕೋಟ್ಯಂತರ ಜನರ ಪರವಾಗಿ ಈ ಹೊತ್ತಿನಲ್ಲಿ ಅವರ ಕುಟುಂಬದ ಜೊತೆ ನಿಲ್ಲಬೇಕಾದುದ್ದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ ” ಎಂದಿದ್ದಾರೆ.
ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿಉಗ್ರರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಕನ್ನಡಿಗ ಯೋಧ ಎಂ.ವಿ.ಪ್ರಾಂಜಲ್ ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರಕ್ಕೆ ಸರಕಾರಿ ಮತ್ತು ಸೇನಾ ಗೌರವ ಸಲ್ಲಿಸುವುದರೊಂದಿಗೆ ಅಂತ್ಯ ಸಂಸ್ಕಾರ ಬೆಂಗಳೂರಿನ ಬನ್ನೇರುಘಟ್ಟದ ಸಮೀಪ ನಡೆಸಲಾಯಿತು.





