Mysore
21
overcast clouds

Social Media

ಮಂಗಳವಾರ, 22 ಅಕ್ಟೋಬರ್ 2024
Light
Dark

ಜಾತಿಗಣತಿ ವರದಿ ವಿರೋಧಿಸಿ ವೀರಶೈವ ಲಿಂಗಾಯತ ಮಹಾಸಭಾದಿಂದ 5 ನಿರ್ಣಯಗಳು

ಬೆಂಗಳೂರು: ನಗರದಲ್ಲಿಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭಾ ಅಂತ್ಯವಾಗಿದೆ.

ಈ ಸಭೆಯಲ್ಲಿ ಪ್ರಮುಖ ಐದು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಜಾತಿಗಣತಿ ವರದಿಯನ್ನು ಒಪ್ಪದಿರಲು ತೀರ್ಮಾನಿಸಿದೆ. ಜಾತಿಗಣತಿ ಅವೈಜ್ಞಾನಿಕವಾಗಿ ನಡೆದಿದೆ ಎಂದು ಪ್ರತಿಪಾದಿಸಿ ಮತ್ತೊಮ್ಮೆ ವೈಜ್ಞಾನಿಕ ಗಣತಿ ನಡೆಸಬೇಕೆಂದು ಒತ್ತಾಯಿಸಲು ತೀರ್ಮಾನ ಮಾಡಲಾಗಿದೆ.

ಸಭೆಯ 5 ಪ್ರಮುಖ ನಿರ್ಣಯಗಳು

1. ಅಖಿಲ ಭಾರತ ವೀರಶೈವ/ಲಿಂಗಾಯತ ಮಹಾಸಭೆಯು ಬಸವಾದಿ ತತ್ವಗಳನ್ನು ಪ್ರತಿಪಾದಿಸುತ್ತಿದ್ದು, ಸರ್ವರಿಗೂ ಲೇಸನ್ನೆ ಬಯಸುವ ಸಮಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಶರಣರ ತತ್ವದ ಆಧಾರದ ಮೇಲೆ ನಡೆಯುತ್ತಿರುವ ಸಂಸ್ಥೆಯಾಗಿದೆ. ನಾವು ಜಾತಿಗಣತಿಯ ವಿರೋಧಿಗಳಲ್ಲ ಎಂಬುದನ್ನು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಲು ಇಚ್ಛಿಸುತ್ತೇವೆ. ಆದರೆ ಕಳೆದ 10 ವರ್ಷಗಳ ಹಿಂದೆ ನಡೆಸಲಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯು ಹಲವು ವೈರುದ್ಯ ಮತ್ತು ಲೋಪಗಳಿಂದ ಕೂಡಿದ್ದು, ಇದನ್ನು ಸರಿಪಡಿಸುವ ಅಗತ್ಯವಿದೆ. ಹೀಗಾಗಿ ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕೆಂದು ಮಹಾಸಭೆ ಆಗ್ರಹಿಸುತ್ತದೆ.

2. ರಾಜ್ಯ ಸರ್ಕಾರದ ಪರಿಗಣನೆಯಲ್ಲಿರುವ, ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸುಗಳು, ಶ್ರೀ ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆಸಿದ ಸಮೀಕ್ಷಾ ವರದಿಯಾಗಿದ್ದು, ಈ ವರದಿಯು ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾದುದ್ದರಿಂದ ಸ್ವೀಕಾರಕ್ಕೆ ಅರ್ಹವಲ್ಲವೆಂದು ಮಹಾಸಭೆಯು ಸ್ಪಷ್ಟವಾಗಿ ಅಭಿಪ್ರಾಯಿಸುತ್ತದೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಈ ಕುರಿತಾದ ಯಾವುದೇ ಉದ್ದೇಶಿತ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಮಹಾಸಭೆಯು ಆಗ್ರಹಿಸುತ್ತದೆ.

3.ರಾಜ್ಯ ಹಿಂದುಳಿದ ವರ್ಗಗಳ (ಓ.ಬಿ.ಸಿ) ಪಟ್ಟಿಯಲ್ಲಿ ವಿವಿಧ ವರ್ಗಗಳ ಅಡಿಯಲ್ಲಿ ಹಲವಾರು ಲಿಂಗಾಯತ ಉಪಪಂಗಡಗಳ ಹೆಸರಿನ ಜೊತೆಯಲ್ಲಿ “ಲಿಂಗಾಯತ” ಪದವಿಲ್ಲದೇ ಕೇವಲ ಉಪಪಂಗಡಗಳ ಹೆಸರನ್ನು ಮಾತ್ರ ನಮೂದಿಸಲಾಗಿರುತ್ತದೆ. ಆದುದರಿಂದ ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯ ಸಿವಿಲ್ ಅಪೀಲ್ ನಂ. 7241/2021 ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಆಧಾರವಾಗಿರಿಸಿಕೊಂಡು, ಎಲ್ಲಾ ಲಿಂಗಾಯತ ಉಪಪಂಗಡಗಳ ಜೊತೆಯಲ್ಲಿ “ಲಿಂಗಾಯತ” ಎಂದು ನಮೂದಿಸಿದ ಆಯ್ಕೆಯನ್ನು ಈಗಿರುವ ಪಟ್ಟಿಯಲ್ಲಿ, ಉಪಪಂಗಡಗಳಿರುವ ವರ್ಗಗಳನ್ನು ಬದಲಾಯಿಸದೇ ಸರ್ಕಾರದ ಆದೇಶಕ್ಕೆ ಸೂಕ್ತ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಮಹಾಸಭಾ ಮನವಿ ಮಾಡುತ್ತದೆ.

4. ವೀರಶೈವ-ಲಿಂಗಾಯತ ಎಲ್ಲಾ ಉಪಪಂಗಡಗಳನ್ನು ಕೇಂದ್ರ ಹಿಂದುಳಿದ ವರ್ಗಗಳ (ಓ.ಬಿ.ಸಿ) ಪಟ್ಟಿಯಲ್ಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮಾನ್ಯ ಮುಖ್ಯಮಂತ್ರಿಗಳು ಶಿಫಾರಸ್ಸು ಮಾಡಬೇಕೆಂದು ಮಹಾಸಭೆಯು ಮನವಿ ಮಾಡುತ್ತದೆ.

5. ಸಾಮಾಜಿಕ ಅಸಮಾನತೆಯ ನಿರಾಕರಣೆ ಮತ್ತು ಸಾಮಾಜಿಕ ನ್ಯಾಯ ಕುರಿತಾದ ಸರ್ಕಾರದ ಎಲ್ಲಾ ಸೈದ್ಧಾಂತಿಕ, ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿ ನಿಂತು ಬೆಂಬಲಿಸುತ್ತದೆ ಎಂದು ನಮ್ಮ ಸಮುದಾಯದ ಪರವಾಗಿ ಮಹಾಸಭೆಯ ಅಧ್ಯಕ್ಷನಾಗಿ ನಾನು ತುಂಬು ಹೃದಯದಿಂದ ಆಶ್ವಾಸನೆಯನ್ನು ನೀಡುತ್ತೇನೆ.

 

 

 

Tags: