ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಎಂಬ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಸಾತ್ವಿಕ್‌ನನ್ನು ರಕ್ಷಣೆ ಮಾಡುವಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ನಿನ್ನೆ ಜಮೀನಿನಲ್ಲಿ ಆಟವಾಡುತ್ತಿದ್ದಾಗ ಜಮೀನಿಗೆ ಬಿದ್ದಿದ್ದ ಸಾತ್ವಿಕ್‌ಗಾಗಿ ತಾಯಿ ಸಾಕಷ್ಟು ಹುಡುಕಾಟ ನಡೆಸಿದ್ದರು. 500 ಅಡಿ ಆಳವಿರುವ ಕೊಳವೆ ಬಾವಿಗೆ ಬಿದ್ದು, 20 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ. ಮಗನಿಗಾಗಿ ಹುಡುಕಾಟ ನಡೆಸಿ ಕೊಳವೆ ಬಾವಿಗೆ ಲೈಟ್ ಬಿಟ್ಟು ನೋಡಿದಾಗ ಸಾತ್ವಿಕ್ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿರುವುದು ತಿಳಿದುಬಂದಿದೆ.
ವಿಷಯ ತಿಳಿದ ಕೂಡಲೇ ಕಾರ್ಯಾಚರಣೆ ಆರಂಭವಾಗಿದೆ. ಎರಡು ಇಟಾಚಿ ಹಾಗೂ ಮೂರು ಜೆಸಿಬಿಗಳನ್ನು ಬಳಸಿ ಕೊಳವೆ ಬಾವಿ ಪಕ್ಕ ನೆಲವನ್ನು ಹಗೆದು ಮಗುವಿನ ರಕ್ಷಣಾಕಾರ್ಯವನ್ನು ಯಶಸ್ವಿಯಾಗಿ ಮಾಡಲಾಗಿದೆ. ಸತತವಾಗಿ 20 ಗಂಟೆಗಳ ಕಾರ್ಯಾಚರಣೆ ಬಳಿಕ ಮಗುವಿನ ರಕ್ಷಣೆ ಮಾಡುವಲ್ಲಿ ತಂಡಗಳು ಯಶಸ್ವಿಯಾಗಿವೆ. ಮಗುವನ್ನು ರಕ್ಷಿಸಿದ ಕೂಡಲೇ ಆಂಬುಲೆನ್ಸ್ ಮೂಲಕ ಇಂಡಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.





