ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ಹಣ ಪಡೆದು ಮೋಸ ಮಾಡಿದ ಪ್ರಕರಣದಡಿಯಲ್ಲಿ ಕಾಂಗ್ರೆಸ್ ಯುವ ನಾಯಕಿ ಸಂದ್ಯಾ ಪವಿತ್ರ ನಾಗರಾಜ್ ವಿರುದ್ಧ ದೂರು ದಾಖಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಸಂದ್ಯಾ ಪವಿತ್ರ ನಾಗರಾಜ್ ಕಾಂಗ್ರೆಸ್‌ನ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನೂ ಹಲವು ಪ್ರಮುಖ ನಾಯಕರ ಜತೆ ಫೋಟೊ ತೆಗೆಸಿಕೊಂಡಿದ್ದು, ಇದನ್ನು ಕಂಡ ಹಲವರು ಕೆಲಸ ಕೊಡಿಸಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಸಂದ್ಯಾಗೆ ಸಂದೇಶ ಕಳುಹಿಸುತ್ತಿದ್ದರು. ಇದನ್ನೇ ಬಳಸಿಕೊಂಡ ಸಂದ್ಯಾ ಕೇಳಿದಷ್ಟು ಹಣ ಕೊಟ್ಟರೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ದೂರಲಾಗಿದೆ.
ಸಂದ್ಯಾ ಪವಿತ್ರ ನಾಗರಾಜ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನ ಮಾರುತಿ ನಗರದ ನಿವಾಸಿ ವೀಣಾ ಎಂಬುವವರಿಗೆ ಫೇಸ್‌ಬುಕ್ ಮೂಲಕ ಪರಿಚಯವಾದ ಸಂದ್ಯಾ ವೀಣಾ ಕೆಲಸ ಹುಡುಕುತ್ತಿರುವುದನ್ನು ತಿಳಿದ ಬಳಿಕ ಎಂಎಸ್ ಬಿಲ್ಡಿಂಗ್‌ನಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ 20 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದರು. ಆದರೆ ಈಗ ಸಂದ್ಯಾ ಕೆಲಸವನ್ನೂ ಕೊಡಿಸದೇ, ಹಣವನ್ನೂ ಸಹ ಹಿಂತಿರುಗಿಸದೇ ವಂಚಿಸಿದ್ದಾರೆ ಎಂದು ವೀಣಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಮತ್ತೊಂದು ಪ್ರಕರಣದಲ್ಲಿ ಸಂದ್ಯಾ ವಿರುದ್ಧ 14.70 ಲಕ್ಷ ವಂಚನೆ ಆರೋಪ ಕೇಳಿಬಂದಿದೆ. 2021ರಲ್ಲಿ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ರಂಗಸ್ವಾಮಿ ಎಂಬುವವರಿಗೆ ಭಾನುಪ್ರಕಾಶ್ ಎಂಬುವವರ ಪರಿಚಯವಾಗಿತ್ತು. ಭಾನುಪ್ರಕಾಶ್ ಮೂಲಕ ಹರೀಶ್ ಎಂಬ ವ್ಯಕ್ತಿಯ ಪರಿಚಯ ರಂಗಸ್ವಾಮಿಗೆ ಆಗಿತ್ತು. ಹೀಗೆ ಪರಿಚಯವಾದ ಹರೀಶ್ ಕೆಲಸ ಕೊಡಿಸುವುದಾಗಿ ರಂಗಸ್ವಾಮಿಯಿಂದ ಹಾಗೂ ರಂಗಸ್ವಾಮಿ ಸಹೋದರಿ ರೂಪಾ ಎಂಬುವವರಿಂದ ತಲಾ 3.5 ಲಕ್ಷ ರೂಪಾಯಿಗಳನ್ನು ಪಡೆದಿದ್ದ. ಬಳಿಕ ಕೆಲಸ ಕೊಡಿಸದ ಹರೀಶ್‌ನನ್ನು ವಿಚಾರಿಸಿದಾಗ ಹಣವನ್ನು ತಾನು ಸಂದ್ಯಾಗೆ ನೀಡಿರುವುದಾಗಿ ತಿಳಿಸಿದ್ದ. ಇದರ ಕುರಿತಾಗಿ ಸಂದ್ಯಾಳನ್ನು ಕೇಳಿದಾಗ ಮತ್ತೆ 7.70 ಲಕ್ಷ ಹಣಕ್ಕೆ ಬೇಡಿಕೆಯಿಟ್ಟ ಸಂದ್ಯಾ ರೂಪಾಳಿಂದಲೇ ಒಟ್ಟು 11.20 ಲಕ್ಷ ಪಡೆದಿದ್ದಾಳೆ. ಹೀಗೆ ಲಕ್ಷಾಂತರ ರೂಪಾಯಿ ಕೊಟ್ಟು ಕೆಲಸ ಸಿಗದೇ ಕೈಸುಟ್ಟುಕೊಂಡ ರೂಪಾ ಬೆಂಗಳೂರಿನ ಜಯನಗರದಲ್ಲಿ ಸಂದ್ಯಾ, ಭಾನುಪ್ರಕಾಶ್ ಹಾಗೂ ಹರೀಶ್ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ ಯಾದಗಿರಿಯ ಚಂದ್ರು ಎಂಬ ಯುವಕನಿಗೂ ಸಹ ಸಂದ್ಯಾ ಹಾಗೂ ತಂಡ ಕೆಲಸ ಕೊಡಿಸುವುದಾಗಿ ನಂಬಿಸಿ ಹಣದ ಮೋಸ ಮಾಡಿದ್ದು ಸದ್ಯ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಯುವಕ ಹಣವನ್ನಾದರೂ ವಾಪಸ್ ಕೊಡಲಿ ಎಂದು ಗೋಳಿಟ್ಟಿದ್ದಾನೆ.





