ಬೆಂಗಳೂರು: ರಾಜ್ಯದಲ್ಲಿ ರೈತರ ಅತ್ಮಹತ್ಯೆ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ 2 ವರ್ಷಗಳಲ್ಲಿ ಒಟ್ಟಾರೆ 1,886 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನದಲ್ಲಿ ಕಂದಾಯ ಇಲಾಖೆಯು ರೈತರ ಆತ್ಮಹತ್ಯೆ ಪ್ರಕರಣಗಳ ಅಂಕಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.
ಕಳೆದ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿ ಬೆಳೆಯಾಗಿದ್ದರೂ, ರೈತರ ಸಂಕಷ್ಟಕ್ಕೆ ಮಾತ್ರ ಕೊನೆ ಇಲ್ಲದಂತಾಗಿದೆ. 2024-25ರ ಸಾಲಿನಲ್ಲೂ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಏರಿಕೆ ಕಂಡಿದೆ.
ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಕೇಂದ್ರಿತ ಆಡಳಿತ ನಡೆಸುತ್ತಿದೆ. ಜೊತೆಗೆ, ಮೊದಲಿನಿಂದಲೂ ರೈತರಿಗೋಸ್ಕರ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೂ ಉತ್ತಮ ಮುಂಗಾರು ಆಗಲಿ, ಇತರ ಯೋಜನೆಗಳಿಂದಾಗಲಿ ರೈತರ ಸಂಕಷ್ಟ ಮಾತ್ರ ಕಡಿಮೆಯಾದಂತೆ ತೋರುತ್ತಿಲ್ಲ. ಒಂದು ವರ್ಷದ ರೈತ ಆತ್ಮಹತ್ಯೆಗಳ ಅಂಕಿ-ಅಂಶಗಳು ವ್ಯತಿರಿಕ್ತ ಚಿತ್ರಣವನ್ನು ತೋರಿಸುತ್ತಿದೆ.





