ಬೆಂಗಳೂರು : ಸಂಪೂರ್ಣವಾಗಿ ತವರಿನ ಅಂಗಣದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದಿರುವ ಬಗ್ಗೆ ಟೀಮ್ ಇಂಡಿಯಾದ ಖ್ಯಾತ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಕೊನೆಗೂ ಮೌನ ಮುರಿದಿದ್ದಾರೆ. ಯುಎಇಯಲ್ಲಿ ನಡೆದಿದ್ದ 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡಕ್ಕೆ ಆಯ್ಕೆ ಆಗುವಲ್ಲಿ ವಿಫಲರಾಗಿದ್ದ ಲೆಗ್ ಸ್ಪಿನ್ನರ್, 2022ರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ಈಗ 2023ನೇ ಸಾಲಿನ ಒಡಿಐ ವಿಶ್ವಕಪ್ ಟೂರ್ನಿಯಲ್ಲೂ ಸ್ಥಾನ ಸಿಗದಿರುವ ಬಗ್ಗೆ ಚಹಲ್ ಬೇಸರ ವ್ಯಕ್ತಪಡಿಸಿದ್ದಾರೆ.
“ತಂಡದಲ್ಲಿ 15 ಸದಸ್ಯರಿಗೆ ಮಾತ್ರ ಸ್ಥಾನ ಕಲ್ಪಿಸಲು ಸಾಧ್ಯ ಎಂಬುದು ನನಗೆ ತುಂಬಾ ಚೆನ್ನಾಗಿ ತಿಳಿದಿದೆ. ಏಕೆಂದರೆ ಇದು ವಿಶ್ವಕಪ್ ಟೂರ್ನಿ. ಇಲ್ಲಿ 17 ರಿಂದ 18 ಮಂದಿಗೆ ಸ್ಥಾನ ನೀಡಲು ಆಗುವುದಿಲ್ಲ,” ಎಂದು ಚಹಲ್ ಹೇಳಿದ್ದಾರೆ.
ತಂಡದಲ್ಲಿ ಸ್ಥಾನ ಸಿಗದಿರುವುದು ನೋವು ತಂದಿದೆ
“ತಂಡದಲ್ಲಿ ಸ್ಥಾನ ಸಿಗದಿರುವುದು ಸಣ್ಣ ಪ್ರಮಾಣದ ನೋವು ತಂದಿದೆ. ಆದರೆ ನನ್ನ ಜೀವನದ ಮುಖ್ಯ ಗುರಿ ಕ್ರಿಕೆಟ್ ಮೈದಾನದಲ್ಲಿ ಮುಂದೆ ಸಾಗುವುದಾಗಿದೆ. ಅದೇ ಕೆಲಸವನ್ನು ನಾನು ಮಾಡಲು ಹೊರಟಿದ್ದೇನೆ. ನಾನು 3 ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದೇನೆ,” ಎಂದು ನಗುತ್ತಲೇ ಚಹಲ್ ತಿಳಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ನ ಖ್ಯಾತ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ಇಂಗ್ಲೆಂಡ್ ಪರ ಕೌಂಟಿ ಕ್ರಿಕೆಟ್ ಆಡುವ ಹಿಂದಿರುವ ಕಾರಣವನ್ನು ತಿಳಿಸಿದ್ದಾರೆ.
“ನನಗೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಆದ್ದರಿಂದಲೇ ನಾನು ಇಲ್ಲಿಗೆ (ಕೆಂಟ್) ಬಂದಿದ್ದೇನೆ. ನಾನು ಯಾವಾಗಲೂ ಎಲ್ಲಾದರೂ , ಹೇಗಾದರೂ ಕ್ರಿಕೆಟ್ ಆಡಲು ಬಯಸುತ್ತೇನೆ,” ಎಂದು ಯುಜಿ ಹೇಳಿದ್ದಾರೆ.
“ರೆಡ್ ಬಾಲ್ (ಟೆಸ್ಟ್) ನಲ್ಲಿ ಆಡಲು ನನಗೆ ಇಲ್ಲಿ ಅವಕಾಶ ಸಿಕ್ಕಿದೆ. ಇದೊಂದು ಉತ್ತಮ ಅನುಭವವಾಗಿದ್ದು, ಭಾರತ ತಂಡದ ಪರವಾಗಿಯೂ ಗಂಭೀರವಾಗಿ ರೆಡ್ ಬಾಲ್ ಕ್ರಿಕೆಟ್ ಆಡಲು ಬಯಸುತ್ತೇನೆ,” ಎಂದು ಚಹಲ್ ಹೇಳಿದ್ದಾರೆ.
“ನಾನು ಕೌಂಟಿ ಕ್ರಿಕೆಟ್ ಆಡುವುದರ ಕುರಿತು ಕೋಚ್ ಗಳೊಂದಿಗೂ ಚರ್ಚಿಸಿದ್ದೇನೆ. ಯಾವುದೋ ಒಂದು ತಂಡದಲ್ಲಿ ಆಡುತ್ತಿರುವುದಕ್ಕೆ ನನಗೂ ಸಂತೋಷವಾಗುತ್ತಿದೆ. ಏಕೆಂದರೆ ನೀವು ನೆಟ್ಸ್ ನಲ್ಲಿ ಸಾಕಷ್ಟು ಅಭ್ಯಾಸ ಮಾಡಬಹುದು, ಆದರೆ ಪಂದ್ಯದ ಅಭ್ಯಾಸವೇ ಬೇರೆ ಅನುಭವ ನೀಡುತ್ತದೆ. ನಾನು ಪ್ರಥಮ ದರ್ಜೆಯಲ್ಲಿ ಉತ್ತಮ ಮಟ್ಟದಲ್ಲಿ ಆಡಲು ಅವಕಾಶ ಪಡೆದಿದ್ದೇನೆ. ಸಾಕಷ್ಟು ವಿಷಯಗಳನ್ನು ಇಲ್ಲಿ ಕಲಿತುಕೊಂಡಿದ್ದೇನೆ,” ಎಂದು ಚಹಲ್ ಹೇಳಿದ್ದಾರೆ.