ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದ ಕುಸ್ತಿಪಟುಗಳು ನಂತರ ಬಿಜ್ ಭೂಷಣ್ ಅವರ ಅವರ ಆಪ್ತ ಸಂಜಯ್ ಸಿಂಗ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ,
ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಸಾಕ್ಷಿ ಮಲಿಕ್ ತಮ್ಮ ಕುಸ್ತಿ ಜಗತ್ತಿಗೆ ವಿದಾಯ ಹೇಳಿದ್ದರು. ಇದೀಗ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳ ಖಂಡಿಸಿ ಮತ್ತೊಬ್ಬ ಕುಸ್ತಿಪಟು ಬಜರಂಗ್ ಪುನಿಯಾ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿಯವರಿಗೆ ಹಿಂದಿರುಗಿಸುತ್ತಿರುವ ಮೂಲಕ ತಮ್ಮ ಅಸಮಧಾನ ಹೊರಹಾಕಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಸ್ತಾರವಾಗಿ ಬರೆದುಕೊಂಡಿರುವ ಅವರು, ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಪ್ರಧಾನಿ ಅವರ ಗಮನವನ್ನು ಕುಸ್ತಿ ಮೇಲೆ ಸೆಳೆಯಲು ತಮಗೆ ಬಂದಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿರುವುದಾಗಿ ಬಜರಂಗ್ ಪುನಿಯಾ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
“ಗೌರವಾನ್ವಿತ ಪ್ರಧಾನಮಂತ್ರಿಗಳೇ, ನೀವು ಆರೋಗ್ಯವಾಗಿದ್ದೀರಿ ಎಂದು ಭಾವಿಸುತ್ತೇವೆ. ಸದಾ ದೇಶ ಸೇವೆಯಲ್ಲಿ ನಿರತರಾಗಿದ್ದೀರಿ. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆ, ನಮ್ಮ ಕುಸ್ತಿಯತ್ತ ನಿಮ್ಮ ಗಮನವನ್ನು ಸೆಳೆಯಲು ನಾನು ಬಯಸುತ್ತೇನೆ. ಈ ವರ್ಷದ ಜನವರಿ ತಿಂಗಳಿನಲ್ಲಿ ದೇಶದ ಮಹಿಳಾ ಕುಸ್ತಿಪಟುಗಳು ಕುಸ್ತಿ ಅಸೋಸಿಯೇಷನ್‌ನ ಉಸ್ತುವಾರಿ ವಹಿಸಿದ್ದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದರು ಎಂದು ನಿಮಗೆ ತಿಳಿದಿರಬೇಕು. ಈ ಬಗ್ಗೆ ಕುಸ್ತಿಪಟುಗಳು ಚಳುವಳಿ ಆರಂಭಿಸಿದಾಗ ಕಾಂಕ್ರಿಕಟ್ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಿರಿ. ಜನವರಿಯಿಂದ 3 ತಿಂಗಳ ಒಳಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಏಪ್ರಿಲ್ ನಲ್ಲಿ ಮತ್ತೆ ನಾವು ಧರಣಿ ಕೈಗೊಂಡಿದ್ದೆವು.
ಆದರೆ ಮೂರು ತಿಂಗಳ ನಂತರವೂ ಬ್ರಿಜ್‌ಭೂಷಣ್ ವಿರುದ್ಧ ಎಫ್‌ಐಆರ್ ದಾಖಲಾಗದಿದ್ದಾಗ, ಏಪ್ರಿಲ್ ತಿಂಗಳಿನಲ್ಲಿ ನಾವು ಕುಸ್ತಿಪಟುಗಳು ಮತ್ತೆ ಬೀದಿಗಿಳಿದು ಪ್ರತಿಭಟಿಸಿದ್ದೇವು. ಆದರೆ ನಮ್ಮ ಪ್ರತಿಭಟನೆಯ ಹೊರತಾಗಿಯೂ ದೆಹಲಿ ಪೊಲೀಸರು ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಿಲ್ಲ. ಆದ್ದರಿಂದ ನಾವು ನ್ಯಾಯಾಲಯಕ್ಕೆ ಹೋಗಿ ಎಫ್‌ಐಆರ್ ದಾಖಲಿಸಬೇಕಾಯಿತು.
ಈ ಹಂತದಲ್ಲಿ 19 ಜನ ಕ್ರೀಡಾಪಟುಗಳು ಸೇರಿ 40 ದಿನಗಳ ಕಾಲ ನಾವು ಪ್ರತಿಭಟನೆ ಮಾಡಿದೆವು. ಆ ಸಮಯದಲ್ಲಿ ನಮ್ಮೆಲ್ಲರ ಮೇಲೆ ಸಾಕಷ್ಟು ಒತ್ತಡವಿತ್ತು. ನಾವು ಪ್ರತಿಭಟನೆ ಮಾಡುತ್ತಿದ್ದ ಸ್ಥಳವನ್ನು ತೆರವುಗೊಳಿಸಲಾಯಿತು. ನಮ್ಮನ್ನು ದೆಹಲಿಯಿಂದ ಓಡಿಸಿದಲ್ಲದೆ, ಪ್ರತಿಭಟನೆ ಮಾಡದಂತೆ ನಮ್ಮನ್ನು ನಿಷೇಧಿಸಲಾಯಿತು.
ಈ ಸಮಯದಲ್ಲಿ ನಮಗೆ ಏನು ಮಾಡಬೇಕೆಂದು ತೋಚಲಿಲ್ಲ. ಹಾಗಾಗಿ ನಾವು ನಮ್ಮ ವೃತ್ತಿಜೀವನದಲ್ಲಿ ಜಯಿಸಿದ್ದ ಪದಕಗಳನ್ನು ಗಂಗೆಯಲ್ಲಿ ವಿಸರ್ಜಿಸಲು ಮುಂದಾದೆವು. ಆದರೆ ಅಲ್ಲಿಗೆ ಹೋದಾಗ ನಮ್ಮ ಕೋಚ್ ಸಾಹಿಬಾನ್ ಮತ್ತು ರೈತರು ಅದಕ್ಕೆ ಅವಕಾಶ ನೀಡಲಿಲ್ಲ. ಅದೇ ಸಮಯದಲ್ಲಿ, ನಿಮ್ಮ ಜವಾಬ್ದಾರಿಯುತ ಸಚಿವರೊಬ್ಬರು ಕರೆ ಮಾಡಿ ಪದಕಗಳನ್ನು ಗಂಗೆಯಲ್ಲಿ ವಿಸರ್ಜಿಸದಂತೆ ಕೇಳಿಕೊಂಡರು. ಹಾಗಾಗಿ ನಾವು ಅಲ್ಲಿಂದ ವಾಪಸ್ಸಾಗಿದ್ದೇವು”. ಎಂದು ಬರೆದುಕೊಂಡಿದ್ದಾರೆ.





