ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯೂಪಿಎಲ್) ಸೀಸನ್-2 ಕ್ಕೆ ಸಿದ್ದತೆ ನಡೆಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಬಲಿಷ್ಠ ತಂಡವನ್ನು ರೂಪಿಸಿದೆ.
ಈ ಬಾರಿಯ ಹರಾಜಿಗೂ ಮುನ್ನ ಆರ್‌ಸಿಬಿ ಒಟ್ಟು 11 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದ ಅರ್‌ಸಿಬಿ, 3.35 ಕೋಟಿ ರೂ.ನೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿತು. ಇದರಲ್ಲಿ ಬೆಂಗಳೂರು ಫ್ರಾಂಚೈಸಿಯು 2.3 ಕೋಟಿ ರೂ. ಖರ್ಚು ಮಾಡಿ ಏಳು ಆಟಗಾರ್ತಿಯರನ್ನು ಖರೀದಿಸಿದೆ. ಅಲ್ಲದೆ 1.05 ಕೋಟಿಯನ್ನು ಪರ್ಸ್ ಮೊತ್ತವಾಗಿ ಉಳಿಸಿಕೊಂಡಿದೆ.
ಆರ್‌ಸಿಬಿ ಮೊದಲ ಸುತ್ತಿನಲ್ಲೇ ಆಸ್ಟ್ರೇಲಿಯಾ ಆಟಗಾರ್ತಿ ಜಾರ್ಜಿಯಾ ವೇರ್ಹ್ಯಾಮ್ ಅವರನ್ನು ಖರೀದಿಸಿತು. 40 ಲಕ್ಷ ರೂ.ಗೆ ಸ್ಪಿನ್ನರ್ ಜಾರ್ಜಿಯಾ ವೇರ್ಹ್ಯಾಮ್ ಅವರನ್ನು ಖರೀದಿಸಿದ ಬಳಿಕ ಆರ್‌ಸಿಬಿ ಮೊದಲ ಸುತ್ತಿನಲ್ಲಿ ಹೆಚ್ಚಿನ ಬಿಡ್ಗೆ ಆಸಕ್ತಿವಹಿಸಿರಲಿಲ್ಲ. ಆದರೆ ಇಂಗ್ಲೆಂಡ್ ಆಟಗಾರ್ತಿಯ ಕೇಟ್ ಕ್ರಾಸ್ ಹೆಸರು ಬರುತ್ತಿದ್ದಂತೆ ಮತ್ತೆ ಬಿಡ್ಡಿಂಗ್ಗೆ ಇಳಿದ ಆರ್‌ಸಿಬಿ 30 ಲಕ್ಷ ರೂ.ನಲ್ಲಿ ನಲ್ಲಿ ತಂಡಕ್ಕೆ ಸೆಳೆಯಲು ಯಶಸ್ವಿಯಾದರು.
ಇದಾದ ಬಳಿಕ ಟಿ20 ಕ್ರಿಕೆಟ್ನ ಹ್ಯಾಟ್ರಿಕ್ ವಿಕೆಟ್ ಸರದಾರಿಣಿ ಏಕ್ತಾ ಬಿಷ್ತ್ ಅವರನ್ನು ಕೊನೆಗೂ 60 ಲಕ್ಷ ರೂ.ಗೆ ತನ್ನದಾಗಿಸಿಕೊಳ್ಳುವಲ್ಲಿ ಆರ್‌ಸಿಬಿ ಯಶಸ್ವಿಯಾಯಿತು.
ಇನ್ನು ಆರ್‌ಸಿಬಿ ಕರ್ನಾಟಕದ ಆಟಗಾರ್ತಿ ಶುಭಾ ಸತೀಶ್ ಅವರನ್ನು 10 ಲಕ್ಷ ರೂ. ಗೆ ಖರೀದಿಸಿತು. ಆ ಬಳಿಕ ಸಿಮ್ರಾನ್ ಬಹದ್ದೂರ್ (30 ಲಕ್ಷ ರೂ.), ಎಸ್. ಮೇಘನಾ (30 ಲಕ್ಷ ರೂ.) ಹಾಗೂ ಸೋಫಿ ಮೊಲಿನೆಕ್ಸ್ (30 ಲಕ್ಷ ರೂ.) ಅವರನ್ನು ಖರೀದಿಸಿ ಆರ್‌ಸಿಬಿ ತಂಡವು 18 ಸದಸ್ಯರ ಬಳಗದ ಬಲಿಷ್ಠ ತಂಡವನ್ನು ಕಟ್ಟಿತು.
ಆರ್‌ಸಿಬಿ ತಂಡ : ಸ್ಮೃತಿ ಮಂಧಾನ (ನಾಯಕಿ), ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್ ಕೇಟ್ ಕ್ರಾಸ್, ಏಕ್ತಾ ಬಿಷ್ತ್, ಶುಭಾ ಸತೀಶ್, ಎಸ್. ಮೇಘನಾ, ಸಿಮ್ರಾನ್ ಬಹದ್ದೂರ್, ಸೋಫಿ ಮೊಲಿನೆಕ್ಸ್.