Mysore
20
overcast clouds
Light
Dark

ವಿಶ್ವಕಪ್‌: ಬಾಂಗ್ಲಾಗೆ 383 ರನ್‌ಗಳ ಬೃಹತ್‌ ಗುರಿ ನೀಡಿದ ದಕ್ಷಿಣ ಆಫ್ರಿಕಾ

ಮುಂಬೈ : ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ರನ್‌ ಹೊಳೆ ಹರಿಸುವ ಮೂಲಕ ಬಾಂಗ್ಲಾ ಗೆ 383 ರನ್‌ ಗುರಿ ನೀಡಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ ಪಿಚ್‌ ನಲ್ಲಿ ಬಾಂಗ್ಲಾ ಬೌಲರ್‌ ಗಳನ್ನು ದಂಡಿಸುವ ಮೂಲಕ ಉತ್ತಮ ರನ್‌ ಪೇರಿಸಿತು. 10 ಓವರ್‌ ಗಳಲ್ಲಿ ಪ್ರಮುಖ 2 ವಿಕೆಟ್‌ ಕಳೆದುಕೊಂಡ ದಕ್ಷಿಣ ಆಫ್ರಿಕಾ ಸಾಧಾರಣ ಮೊತ್ತ ಗಳಿಸುವ ಮುನ್ಸೂಚನೆ ನೀಡಿದಂತಿತ್ತು. ಆದರೆ ಕ್ವಿಂಟನ್‌ ಡಿ ಕಾಕ್‌ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ವಾಂಖೆಡೆಯಲ್ಲಿ ನೆರೆದಿದ್ದ ಕ್ರಿಕೆಟ್‌ ಪ್ರಿಯರ ಮನ ತಣಿಸಿತು. ಪರಿಣಾಮ ಕ್ವಿಂಟನ್‌ ಡಿ ಕಾಕ್‌ ನಿವೃತ್ತಿಯ ನಿರ್ಧಾರ ಬದಲಿಸಿ ಎನ್ನುವ ಪೋಸ್ಟರ್‌ ಗಳು ರಾರಾಜಿಸಿದವು.

ಡಿʼಕಾಕ್‌ ಭರ್ಜರಿ ಹೊಡೆತಗಳು, ಅದಾಗಲೇ 2023 ವಿಶ್ವಕಪ್‌ ನಲ್ಲಿ 3 ಶತಕ ದಾಖಲಿಸಿದ ಮೊದಲ ಬ್ಯಾಟರ್‌ ಗರಿಮೆ ತಂದಿತು. ವಾಂಖೆಡೆಯ ಅಷ್ಟ ದಿಕ್ಕುಗಳಿಗೂ ತಮ್ಮ ಬ್ಯಾಟ್‌ನಿಂದ ಸಿಡಿದ ಹೊಡೆತಗಳ ಮೂಲಕ ಬಾಲ್‌ ಮುಟ್ಟಿಸಿದ ಡಿ ಕಾಕ್‌ ದ್ವಿ ಶತಕ ದಾಖಲಿಸಬಹುದು ಎನ್ನುವ ಆಶಾವಾದ ಹುಟ್ಟಿಸಿತು. ಆದರೆ, ಕ್ವಿಂಟನ್‌ ಡಿʼಕಾಕ್‌ 140 ಎಸೆತಗಳಲ್ಲಿ 15 ಬೌಂಡರಿ, 7 ಸಿಕ್ಸರ್‌ ಗಳೊಂದಿಗೆ 174 ರನ್‌ ಗಳಿಸಿದ್ದಾಗ ಹಸನ್‌ ಮಹ್ಮೂದ್‌ ಎಸೆತದಲ್ಲಿ ಸಿಕ್ಸರ್‌ ಬಾರಿಸಲು ಹೋಗಿ ಬೌಂಡರಿ ಲೈನ್‌ ನಲ್ಲಿ ನಸೂಮ್‌ ಅಹ್ಮದ್‌ ಗೆ ಕ್ಯಾಚಿತ್ತು ಔಟ್‌ ಆದರು. ದ್ವಿಶತಕ ಸಾಧನೆ ಮಾಡುವ ಅವಕಾಶದಿಂದ ವಂಚಿತರಾದರು.

ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಬಂದ ಹೆನ್ರಿಚ್‌ ಕ್ಲಾಸೆನ್‌ ಬೀಸುವ ಹೊಡೆತಗಳಿಂದ ಏಕದಿನ ವಿಶ್ವಕಪ್‌ ಗೆ ಟಿ 20ಯ ವೇಗ ನೀಡಿದರು. 49 ಎಸೆತಗಳಲ್ಲಿ 90 ರನ್‌ ಗಳಿಸಿದ ಅವರು 8 ಸಿಕ್ಸರ್‌, 2 ಬೌಂಡರಿಗಳೊಂದಿಗೆ ವೇಗದ ಶತಕ ದಾಖಲಿಸಬಹುದು ಎನ್ನುವ ಮುನ್ಸೂಚನೆ ನೀಡಿದ್ದರು. ಆದರೆ 90 ರನ್‌ ಗಳಿಸಿದ್ದಾಗ ವೈಡ್‌ ಬಾಲ್‌ ಗೆ ಸಿಕ್ಸರ್‌ ಎತ್ತಲು ಹೋಗಿ ಹಸನ್‌ ಮಹ್ಮೂದ್‌ ಬೌಲಿಂಗ್‌ ನಲ್ಲಿ ಮಹಮ್ಮದುಲ್ಲಾಗೆ ಬೌಂಡರಿ ಲೈನ್‌ ನಲ್ಲಿ ಕ್ಯಾಚಿತ್ತು ನಿರಾಸೆ ಮೂಡಿಸಿದರು.

ಹಂಗಾಮಿ ನಾಯಕ ಐಡೆನ್‌ ಮಾರ್ಕ್ರಮ್‌ 69 ಬೌಲ್‌ ಗಳಲ್ಲಿ 7 ಬೌಂಡರಿ ಬಾರಿಸುವ ಮೂಲಕ ಅರ್ಧ ಶತಕದೊಂದಿಗೆ 60 ರನ್‌ ಗಳಿಸಿ ಶಕೀಬ್‌ ಅಲ್‌ ಹಸನ್‌ ಬೌಲಿಂಗ್‌ ನಲ್ಲಿ ಲಿಟನ್‌ ದಾಸ್‌ ಗೆ ಕ್ಯಾಚಿತ್ತು ಔಟ್‌ ಆದರು. ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಡೇವಿಡ್‌ ಮಿಲ್ಲರ್‌ 15 ಬಾಲ್‌ಗಳಲ್ಲಿ 4 ಸಿಕ್ಸರ್‌, 1 ಬೌಂಡರಿಯೊಂದಿಗೆ 34 ರನ್‌ ಸಿಡಿಸಿ ಉತ್ತಮ ರನ್‌ ಪೇರಿಸಿದರು. ರಿಝಾ ಹೆಂಡ್ರಿಕ್ಸ್‌ 12, ಎಂ ಜಾನ್ಸ್‌ನ್‌ 1 ರನ್‌ ಗಳಿಸಿದರು.

ಬಾಂಗ್ಲಾದೇಶದ ಬೌಲರ್‌ ಹಸನ್‌ ಮಹ್ಮೂದ್‌ 6 ಓವರ್‌ ಗಳಲ್ಲಿ 67 ರನ್‌ ನೀಡುವ ಮೂಲಕ ಬಲು ದುಬಾರಿ ಎನಿಸಿದರು. ಮುಸ್ತಫಿಝುರ್ರಹ್ಮಾನ್‌, ಶೊರೀಫುಲ್‌ ಇಸ್ಲಾಂ ತಲಾ 9 ಓವರ್‌ ಗಳಲ್ಲಿ 76 ರನ್‌ ನೀಡಿದರು. ಶಕೀಬ್‌ ಅಲ್‌ ಹಸನ್‌ 9 ಓವರ್‌ ಗೆ 69 ರನ್‌ ನೀಡಿದರು. ಹಸನ್‌ ಮಹ್ಮೂದ್‌ 2 ವಿಕೆಟ್‌ ಪಡೆದರು. ಮುಸ್ತಫಿಝುರ್ರಹ್ಮಾನ್‌, ಶೊರೀಫುಲ್‌ ಇಸ್ಲಾಂ, ಮೆಹದಿ ಹಸನ್‌ ತಲಾ 1 ವಿಕೆಟ್‌ ಪಡೆದರು.

ಈ ಪಂದ್ಯದಲ್ಲಿ ಕ್ವಿಂಟನ್‌ ಡಿ ಕಾಕ್‌ ದ್ವಿಶತಕ ತಪ್ಪಿಸಿಕೊಂಡಿದ್ದರೂ, ಟೂರ್ನಿಯಲ್ಲಿ ಒಂದೇ ಪಂದ್ಯದಲ್ಲಿ 174 ರನ್ ಗಳಿಸುವ ಮೂಲಕ ಅತೀ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಗಳಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಜೊತೆಗೆ ವೈಯುಕ್ತಿಕ ಒಟ್ಟು ಮೊತ್ತದಲ್ಲಿ ಭಾರತದ ವಿರಾಟ್‌ ಕೊಹ್ಲಿ(354) ಹಿಂದಿಕ್ಕಿ 407 ರನ್‌ ಗಳಿಸಿದ್ದಾರೆ.

ಬಾಂಗ್ಲಾದೇಶ ತಂಡಕ್ಕೆ ಪಂದ್ಯ ಗೆಲ್ಲಲು 50 ಓವರ್‌ ಗಳಲ್ಲಿ 383 ರನ್‌ ಗಳ ಅವಶ್ಯಕತೆಯಿದೆ. ಪ್ರತೀ ಓವರ್‌ ಗೆ 7.64 ರನ್‌ ರೇಟ್‌ ಬೇಕಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ