Mysore
25
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ವಿಶ್ವಕಪ್: ನೆದರ್ಲ್ಯಾಂಡ್ಸ್ ವಿರುದ್ಧ ಅಫ್ಘಾನಿಸ್ತಾನಕ್ಕೆ 7 ವಿಕೆಟ್ ಗೆಲುವು

ಲಕ್ನೋ : ಸಂಘಟಿತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಪ್ರದರ್ಶನ ತೋರಿದ ಅಫ್ಘಾನಿಸ್ತಾನ ತಂಡವು ನೆದರ್‌ಲ್ಯಾಂಡ್ಸ್‌ ವಿರುದ್ದ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಸೆಮಿ ಫೈನಲ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಎಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನೆದರ್ಲ್ಯಾಂಡ್ಸ್ ನೀಡಿದ 180 ರನ್ ಅಲ್ಪ ಮೊತ್ತ ಬೆನ್ನಟ್ಟಿದ ಆಫ್ಘಾನ್ ತಂಡ ಮೂರು ವಿಕೆಟ್ ಕಳೆದುಕೊಂಡು 31.3 ಓವರ್ ನಲ್ಲಿ ಗುರಿ ತಲುಪಿತು. ಅಫ್ಘಾನಿಸ್ತಾನ ಪರ ಗೆಲುವಿನ ಆಟ ಪ್ರದರ್ಶಿಸಿದ ರಹ್ಮತ್ ಶಾ ಹಾಗೂ ಹಶ್ಮತುಲ್ಲಾ ಶಾಹಿದಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರು.

ಈ ಗೆಲುವಿನ ಮೂಲಕ ಅಫ್ಘಾನಿಸ್ತಾನ ಅಂಕ ಪಟ್ಟಿಯಲ್ಲಿ 5 ನೇ ಸ್ಥಾನಕ್ಕೆ ಏರಿಕೆ ಆಗುವುದರೊಂದಿಗೆ ಸೆಮಿ ಫೈನಲ್ ರೇಸ್ ಗೆ ಲಗ್ಗೆ ಇಟ್ಟಿದೆ. ಪರಿಣಾಮ ನ್ಯೂಜಿಲ್ಯಾಂಡ್ , ಆಸ್ಟ್ರೇಲಿಯ ಹಾಗೂ ಪಾಕಿಸ್ತಾನ ತಂಡಕ್ಕೆ ಕಠಿಣ ಸ್ಪರ್ದೆ ಒಡ್ಡಿದೆ. ಮುಂದಿನ ಎರಡು ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದಿದ್ದೇ ಆದರೆ ಅಫ್ಘಾನಿಸ್ತಾನ ಸುಲಭವಾಗಿ ಮುಂದಿನ ಹಂತಕ್ಕೆ ತೇರ್ಗಡೆಯಾಗಳಲಿದೆ.

ಅಲ್ಪ ಗುರಿ ಬೆನ್ನಟ್ಟುವ ಹುಮ್ಮಸ್ಸಿಲ್ಲಿ ಬ್ಯಾಟಿಂಗ್ ಗೆ ಇಳಿದ ಅಫ್ಘಾನ್ ಗೆ ಡಚ್ ಬೌಲರ್ ಗಳು ಆಘಾತ ನೀಡಿದರು. ಆರಂಭಿಕ ಆಟಗಾರ ರಹ್ಮತುಲ್ಲಾ ಗುರ್ಬಾಝ್ 10 ರನ್ ಗೆ ಲೋಗನ್ ವಾನ್ ಬೀಕ್ ಬೌಲಿಂಗ್ ನಲ್ಲಿ ಸ್ಕಾಟ್ ಎಡ್ವಡ್ಸ್ ಗೆ ಕ್ಯಾಚಿತ್ತು ಔಟ್ ಆದರೆ, ಇಬ್ರಾಹೀಂ ಝದ್ರಾನ್ 20 ರನ್ ಗೆ ವ್ಯಾನ್ ಡೆರ್ ಮರ್ವೆ ಗೆ ವಿಕೆಟ್ ಒಪ್ಪಿಸಿದರು.

ಬಳಿಕ ಜೊತೆಯಾದ ರಹ್ಮತ್ ಶಾ ಹಾಗೂ ನಾಯಕ ಹಶ್ಮತುಲ್ಲಾ ಶಾಹಿದಿ 74 ರನ್ ಗಳ ಜೊತೆಯಾಟ ನಿರ್ವಹಿಸಿದರು. ರಹ್ಮತ್ ಶಾ 8 ಬೌಂಡರಿ ಸಹಿತ 52 ರನ್ ಬಾರಿಸಿ ಶಾಕಿಬ್ ಝುಲ್ಫಿಕರ್ ಬೌಲಿಂಗ್ ನಲ್ಲಿ ಕಾಟ್ ಅಂಡ್ ಬೌಲ್ಡ್ ಆದರು. ನಂತರ ತಂಡವನ್ನು ಗೆಲ್ಲಿಸುವ ಹೊಣೆ ಹೊತ್ತ ನಾಯಕ ಹಶ್ಮತುಲ್ಲಾ ಶಾಹಿದಿ ಟೂರ್ನಿಯಲ್ಲಿ ಮತ್ತೊಂದು ಬಲವಾದ ಆಟ ಪ್ರದರ್ಶಿಸಿದರು. 6 ಬೌಂಡರಿ ಸಹಿತ 56 ಚಚ್ಚಿದ ಶಾಹಿದಿ 31.3 ಓವರ್ ನಲ್ಲಿ 4 ಬಾರಿಸುವುದರೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಆವರಿಗೆ ಅಝ್ಮತುಲ್ಲಾ 31 ರನ್ ಗಳಿಸಿ ಸಾಥ್ ನೀಡಿದರು.

ನೆದರ್ಲ್ಯಾಂಡ್ಸ್ ಪರ ಲೋಗನ್ ವಾನ್ ಬೀಕ್, ವ್ಯಾನ್ ಡೆರ್ ಮರ್ವೆ ಹಾಗೂ ಶಾಕಿಬ್ ಝುಲ್ಫಿಕರ್ ಒಂದು ವಿಕೆಟ್ ಪಡೆದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ನೆದರ್ಲ್ಯಾಂಡ್ಸ್, ಆರಂಭದಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ಡಚ್ ಪಡೆ ಅಫ್ಘಾನ್ ಬೌಲಿಂಗ್‌ ಮತ್ತು ಫೀಲ್ಡಿಂಗ್ ಗೆ ಪೆವಿಲಿಯನ್ ಪೆರೇಡ್‌ ನಡೆಸಿತು. ನೆದರ್ಲ್ಯಾಂಡ್ಸ್ ಪರ ಓಪನರರ್ ಬ್ಯಾರಸಿ ಮೊದಲ ಓವರ್ ನಲ್ಲಿಯೇ ಕೇವಲ 1 ರನ್ ಗೆ ಮುಜೀಬ್ ಬೌಲಿಂಗ್ ನಲ್ಲಿ ಎಬಿಡಬ್ಲೂ ಆದರೆ ಮಾಕ್ಸ್ ಒ”ಡೌಡ್ 42 ರನ್ ಗಳಿಸಿ ಅಝ್ಮತುಲ್ಲಾ ಒಮರ್ಝೈ ಅದ್ಬುತ ರನೌಟ್ ಗೆ ಬಲಿಯಾದರು.

ಕಾಲಿನ್ ಅಕೆರ್ಮಾನ್ 29 ರನ್ ಹಾಗೂ ನಾಯಕ ಎಡ್ವಡ್ಸ್ ಶೂನ್ಯಕ್ಕೆ ಕ್ರಮವಾಗಿ ಇಕ್ರಮ್ ಅಲಿಖಿಲ್ ಭರ್ಜರಿ ಫೀಲ್ಡಿಂಗ್ ಗೆ ರನೌಟ್ ಆದರು. ತಂಡ ನೂರೈವತ್ತು ದಾಟುವಲ್ಲಿ ಏಕಾಂಗಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಸೈಬ್ರಾಂಡ್ ಎಂಗಲ್ ಬ್ರೆಕ್ಟ್ ಆಕರ್ಷಕ 6 ಬೌಂಡರಿ ಸಹಿತ 58 ರನ್ ಬಾರಿಸಿ ತಂಡದ ಪರ ಒಂಟಿ ಅರ್ಧಶತಕ ದಾಖಲಿಸಿದರು.

ಬಾಸ್ ಡೆ ಲೀಡ್, ಶಾಕಿಬ್ ಝುಲ್ಫಿಕರ್,ಲೋಗನ್ ವಾನ್ ಬೀಕ್ ಕ್ರಮವಾಗಿ 3,3,2 ರನ್ ಗಳಿಸಿದರು. ಕಡೆಯಲ್ಲಿ ಬ್ಯಾಟ್ ಬೀಸಿದ್ದ ವ್ಯಾನ್ ಡೆರ್ ಮರ್ವೆ ಉಪಯುಕ್ತ 11 ರನ್ ಬಾರಿಸಿದರೆ ಆರ್ಯನ್ ದತ್ 10 ರನ್ ಗಳಿಸದರು.

ಅಫ್ಘಾನಿಸ್ತಾನ ಪರ ಮಹಮ್ಮದ್ ನಬಿ 3 ವಿಕೆಟ್ ಪಡೆದರೆ ನೂರ್ ಅಹ್ಮದ್ 2 ಹಾಗೂ ಮುಜೀಬ್ ಉರ್ ರಹ್ಮಾನ್ ಒಂದು ವಿಕೆಟ್ ಪಡೆದರು.

ಪಂದ್ಯ ಶ್ರೇಷ್ಠ : ಮಹಮ್ಮದ್‌ ನಬಿ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ