Mysore
20
overcast clouds
Light
Dark

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಫೈನಲ್ ತಲುಪಿದ ಭಾರತೀಯ ಪುರುಷರ ರಿಲೇ ತಂಡ

ಬುಡಾಪೆಸ್ಟ್ : ಭಾರತೀಯ ಪುರುಷರ 4×400 ಮೀ. ರಿಲೇ ತಂಡವು ಶನಿವಾರ ನಡೆದ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 2 ನಿಮಿಷ 59.05 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಮೊದಲ ಬಾರಿ ಫೈನಲ್ ಗೆ ಅರ್ಹತೆ ಪಡೆದಿದ್ದಲ್ಲದೆ ಏಶ್ಯನ್ ದಾಖಲೆಯನ್ನು ಮುರಿದಿದೆ.

ಮುಹಮ್ಮದ್ ಅನಸ್ ಯಾಹಿಯಾ, ಅಮೋಜ್ ಜೇಕಬ್, ಮುಹಮ್ಮದ್ ಅಜ್ಮಲ್ ವರಿಯಥೋಡಿ ಹಾಗೂ ರಾಜೇಶ್ ರಮೇಶ್ ಅವರನ್ನೊಳಗೊಂಡ ಭಾರತದ ರಿಲೇ ತಂಡವು ಯುಎಸ್ಎ (2:58.47) ನಂತರ ಹೀಟ್ ನಂಬರ್ ಒನ್ ನಲ್ಲಿ ಎರಡನೇ ಸ್ಥಾನ ಪಡೆದು ರವಿವಾರ ನಡೆಯಲಿರುವ ಫೈನಲ್ ಗೆ ಅರ್ಹತೆ ಪಡೆಯಿತು.

ಪ್ರತಿ ಎರಡು ಹೀಟ್ಸ್ ನಲ್ಲಿ ಅಗ್ರ ಮೂರು ಸ್ಥಾನ ಪಡೆದವರು ಹಾಗೂ ವೇಗವಾಗಿ ಗುರಿ ತಲುಪಿದ ಇಬ್ಬರು ಓಟಗಾರರು ಫೈನಲ್ಗೆ ಅರ್ಹತೆ ಪಡೆಯುತ್ತಾರೆ.

ಹಿಂದಿನ ಏಶ್ಯನ್ ದಾಖಲೆ (2:59.51) ಜಪಾನ್ ತಂಡದ ಹೆಸರಿನಲ್ಲಿತ್ತು. ಹಿಂದಿನ ರಾಷ್ಟ್ರೀಯ ದಾಖಲೆ (3:00.25) 2021 ರಲ್ಲಿ ನಿರ್ಮಾಣ ಆಗಿತ್ತು.

ಭಾರತೀಯರು ವಿಶ್ವ ದಾಖಲೆ ಹೊಂದಿರುವ ಅಮೆರಿಕನ್ನರಿಗೆ ತೀವ್ರ ಹೋರಾಟ ನೀಡಿದ್ದು ಅಮೆರಿಕದ ನಂತರ 2ನೇ ಸ್ಥಾನ ಪಡೆದರು.

ಭಾರತವು ಅಂತಿಮವಾಗಿ ಎರಡು ಹೀಟ್ಸ್ ಗಳ ನಂತರ ಅಮೆರಿಕದ ನಂತರ ಎರಡನೇ ಸ್ಥಾನ ಗಳಿಸಿತು, ಆದರೆ ಗ್ರೇಟ್ ಬ್ರಿಟನ್ (3ನೇ ಸ್ಥಾನ ; 2:59.42) ಹಾಗೂ ಜಮೈಕಾ (5ನೇ; 2:59.82) ದಂತಹ ಪ್ರಬಲ ತಂಡಗಳನ್ನುಹಿಂದಿಕ್ಕಿತು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ