ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ವನಿತೆಯರ ಟಿ20 ವಿಶ್ವಕಪ್ 2024 ಟೂರ್ನಿಯ ಗ್ರೂಪ್ ಹಂತದ 7ನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 105 ರನ್ ಕಲೆಹಾಕಿ ಭಾರತಕ್ಕೆ ಗೆಲ್ಲಲು 106 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಕಲೆಹಾಕಿತು. ಈ ಮೂಲಕ ಟೂರ್ನಿಯಲ್ಲಿ ಮೊದಲ ಬಾರಿಗೆ ಜಯ ಕಂಡಿತು.
ಪಾಕ್ ಇನ್ನಿಂಗ್ಸ್: ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದ ಪಾಕ್ ಆರಂಭದಲ್ಲೇ ಆಘಾತ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿಕೊಂಡಿತು, ಬೇಗನೆ ತನ್ನ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಪರ ಗುಲ್ ಫೆರೋಜಾ 0, ಮುನೀಬಾ ಅಲಿ 17, ಸಿದ್ರಾ ಅಮಿನ್ 8, ಒಮೈಮಾ ಸೊಹೈಲ್ 3, ನಿದಾ ದರ್ 28, ಅಲಿಯಾ ರಿಯಾಜ್ 4, ನಾಯಕಿ ಫಾತಿಮಾ ಸನಾ 13, ತುಬಾ ಹಸನ್ 0, ಸೈದಾ ಅರೂಬ್ ಶಾ ಅಜೇಯ 14 ಮತ್ತು ನಶ್ರಾ ಸಂದು ಅಜೇಯ 6 ರನ್ ಗಳಿಸಿದರು.
ಭಾರತದ ಪರ ಅರುಂಧತಿ ರೆಡ್ಡಿ 3 ವಿಕೆಟ್, ಶ್ರೇಯಾಂಕ ಪಾಟೀಲ್ 2, ಆಶಾ ಶೋಭನ, ರೇಣುಕಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತದ ಇನ್ನಿಂಗ್ಸ್: ಭಾರತದ ಪರ ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಆರಂಭಿಕರಾಗಿ ಕಣಕ್ಕಿಳಿದರು. ಈ ಪೈಕಿ ಸ್ಮೃತಿ ಮಂಧಾನ 7 ರನ್ ಗಳಿಸಿದರೆ, ಶೆಫಾಲಿ ವರ್ಮಾ 32 ರನ್ ಗಳಿಸಿದರು. ರೊಡ್ರಿಗ್ಯೂಸ್ 23 ರನ್ ಬಾರಿಸಿದರೆ, ರಿಚಾ ಘೋಷ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅಜೇಯ 29 ರನ್ ಗಳಿಸಿ ಕುತ್ತಿಗೆ ನೋವು ಕಾಣಿಸಿಕೊಂಡ ಕಾರಣ ರಿಟೈರ್ಡ್ ಹರ್ಟ್ ಆದರು. ದೀಪ್ತಿ ಶರ್ಮಾ ಅಜೇಯ 7 ರನ್ ಮತ್ತು ಎಸ್ ಸಂಜನ ಅಜೇಯ 4 ರನ್ ಗಳಿಸಿದರು.
ಪಾಕಿಸ್ತಾನದ ಪರ ಫಾತಿಮಾ ಸನಾ 2 ವಿಕೆಟ್, ಸಾದಿಯಾ ಇಕ್ಬಾಲ್ ಮತ್ತು ಒಮೈಮಾ ಸೊಹೈಲ್ ತಲಾ ಒಂದೊಂದು ವಿಕೆಟ್ ಪಡೆದರು.