ಗಾಯಾನಾ (ವೆಸ್ಟ್ ಇಂಡೀಸ್): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಕ್ರೆಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುತ್ತೆ ಎಂಬುದು ಪಕ್ಕಾ ಆಗಿತ್ತು. ಆದರೆ 15ನೇ ಓವರ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ನಿಕೋಲಸ್ ಪೂರನ್ ವಿಕೆಟ್ ಪಡೆದ ಮುಕೇಶ್ ಕುಮಾರ್ ತಂಡಕ್ಕೆ ತಿರುವು ನೀಡಿದರು.
ಆ ಬಳಿಕ ಅಂದರೆ 16ನೇ ಓವರ್ ಬೌಲಿಂಗ್ ಮಾಡಲು ಬಂದ ಚಾಹಲ್, ರೊಮಾರಿಯೊ ಶೆಫರ್ಡ್ ರನೌಟ್, ಜೇಸನ್ ಹೋಲ್ಡರ್ ಸ್ಟಂಪಿಂಗ್ ಹಾಗೂ ಶಿಮ್ರಾನ್ ಹೆಟ್ಮೆಯರ್ ಎಲ್‌ಬಿ ಬಲೆಗೆ ಕೆಡವಿ ಪಂದ್ಯವನ್ನು ಟೀಂ ಇಂಡಿಯಾದತ್ತ ವಾಲಿಸಿ ಮತ್ತಷ್ಟು ರೋಚಕತೆಗೆ ತಂದಿಟ್ಟರು. ಈ ಓವರ್‌ನಲ್ಲಿ ಚಾಹಲ್ ಕೇವಲ 2 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದರು.
ಕೊನೆಗೆ ಅಕೇಲ್ ಹೊಸೇನ್ ಹಾಗೂ ಅಲ್ಜಾರಿ ಜೋಸೆಫ್ ಅವರು ಟೀಂ ಇಂಡಿಯಾ ಗೆಲ್ಲುವನ್ನು ಕಿತ್ತುಕೊಂಡರು. 18ನೇ ಓವರ್‌ನಲ್ಲಿ ಅರ್ಹಷದೀಪ್ ಅವರನ್ನು ಬೌಲಿಂಗ್‌ಗೆ ಇಳಿಸಿ ಹಾರ್ದಿಕ್ ಪಾಂಡ್ಯ ಕೈ ಸುಟ್ಟುಕೊಂಡಂತಾಯಿತು.
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ವಿಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಿರಾಸೆ ಅನುಭವಿಸಿತು. ಆ ಮೂಲಕ ವಿಂಡೀಸ್ ವಿರುದ್ಧ ಸತತ ಎರಡನೇ ಸೋಲು ಕಂಡಿದೆ. ವಿಂಡೀಸ್ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಸತತವಾಗಿ 2 ಪಂದ್ಯಗಳಲ್ಲಿ ಸೋತಿರುವುದು 12 ವರ್ಷಗಳ ಬಳಿಕ ಇದೇ ಮೊದಲು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ತಿಲಕ್ ವರ್ಮಾ ಅವರ ಅರ್ಧ ಶತಕದ (51) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 152 ರನ್ ಗಳಿಸಿತ್ತು. ವಿಂಡೀಸ್ ಪರ ರೊಮಾರಿಯೊ ಶೆಫರ್ಡ್, ಅಲ್ಜಾರಿ ಜೋಸೆಫ್ ಹಾಗೂ ಅಕೀಲ್ ಹೊಸೇನ್ ತಲಾ 2 ವಿಕೆಟ್ ಪಜೆದರು.
ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 18.5 ಓವರ್‌ಗಳಲ್ಲಿ ಇನ್ನೂ 2 ವಿಕೆಟ್ ಬಾಕಿ ಇರುವಂತೆ 155 ರನ್ ಸಿಡಿಸಿ ಗೆದ್ದು ಬೀಗಿತು. ವಿಂಡೀಸ್ ಪರ ನಿಕೋಲಸ್ ಪೂರನ್ ಅಬ್ಬರಿಸಿದರು. ಕೇವಲ 40 ಎಸೆತಗಳಲ್ಲಿ 67 ರನ್ ಸಿಡಿಸುವ ಮೂಲಕ ಆಕ್ರಮಣಕಾರಿ ಆಟವಾಡಿದರು. ಟೀಂ ಇಂಡಿಯಾ ಪರ ನಾಯಕ ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದರೆ, ಚಾಹಲ್ 2, ಅರ್ಷದೀಪ್ ಹಾಗೂ ಮುಕೇಶ್ ಕುಮಾರ್ ತಲಾ 1 ವಿಕೆಟ್ ಕಿತ್ತರು. ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ 2-0 ಅಂತರದ ಮುನ್ನಡೆ ಸಾಧಿಸಿದೆ.
ಪಂದ್ಯ ಶ್ರೇಷ್ಠ : ನಿಕೋಲಸ್ ಪೂರನ್