ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳಾ ಕುಸ್ತಿ ಪಂದ್ಯದಲ್ಲಿ ಕೇವಲ 100ಗ್ರಾಂ ತೂಕ ಹೆಚ್ಚಿದ್ದ ಕಾರಣಕ್ಕಾಗಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಗಿದೆ. ಇದರಿಂದಾಗಿ ಭಾರತದ ಮೊದಲ ಚಿನ್ನದ ಪದಕದ ನಿರೀಕ್ಷೆ ಕಮರಿದೆ.
ಈ ನಡುವೆ ನಿರ್ಜಲೀಕರಣದಿಂದಾಗಿ ಬಳಲುತ್ತಿರುವ ವಿನೇಶ್ ಫೋಗಟ್ ಅವರನ್ನು ಕ್ಲಿನಿಕ್‌ಗೆ ದಾಖಲಿಸಲಾಗಿದೆ. ಇದೀಗ ವಿನೇಶ್‌ರನ್ನು ಭೇಟಿಯಾಗಿದ್ದ ಭಾರತೀಯ ಒಲಿಂಪಿಕ್ಸ್ ಅಧ್ಯಕ್ಷೆ ಪಿಟಿ ಉಷಾ ಅನರ್ಹದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಿನೇಶ್ ಫೋಗಟ್ ಅವರ ಅನರ್ಹತೆ ಆಘಾತಕಾರಿಯಾಗಿದೆ. ವಿನೇಶ್ ಅವರಿಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ, ಭಾರತ ಸರ್ಕಾರ ಹಾಗೂ ಇಡೀ ದೇಶದ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದೇವೆ. ಜೊತೆಗೆ ವಿನೇಶ್‌ಗೆ ಎಲ್ಲಾ ರೀತಿಯ ವೈದ್ಯಕೀಯ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನೂ ವಿನೇಶ್ ಅವರ ಅನರ್ಹತೆ ಬಗ್ಗೆ ಮಾತನಾಡಿದ ಅವರು, ಅನರ್ಹತೆಯ ವಿರುದ್ಧ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ನಿರಂತರವಾಗಿ ಧ್ವನಿ ಎತ್ತುತ್ತಿದೆ. ಡಬ್ಲ್ಯುಎಫ್‌ಐ ಕೂಡ ಒಲಿಂಪಿಕ್ಸ್ ಸಮಿತಿಗೆ ಪತ್ರ ಬರೆದು ವಿನೇಶ್ ಅವರ ಅನರ್ಹತೆ ಬಗ್ಗೆ ವಿರೋಧ ವ್ಯಕಪಡಿಸಿದೆ ಎಂದಿದ್ದಾರೆ.
ವಿನೇಶ್ ಅವರಿಗೆ ವ್ಯದ್ಯಕೀಯ ತಪಾಸಣೆ ನಡೆಸಲಾಗಿದ್ದು, ಸದ್ಯ ಆಕೆ ಆರೋಗ್ಯವಾಗಿದ್ದಾರೆ. ವಿನೇಶ್ ದೈಹಿಕವಾಗಿ ಚೆನ್ನಾಗಿದ್ದಾರೆ ಆದರೆ ಮಾನಸಿಕವಾಗಿ ಅವರು ತುಂಬಾ ಕುಗ್ಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೂ ತೂಕ ಹೆಚ್ಚಳದ ಬಗ್ಗೆ ಮಾಹಿತಿ ನೀಡಿರುವ ವೈದ್ಯ ಪರ್ದಿವಾಲಾ, ಕೆಲವೊಮ್ಮೆ ನಿರಂತರ ಪಂದ್ಯಗಳಿಂದ ಹೆಚ್ಚು ನೀರು ಕುಡಿಯಬೇಕಾಗುತ್ತದೆ. ಅಂತಹ ಪರಿಸ್ಥಿರಿಯಲ್ಲಿ ತೂಕ ಹೆಚ್ಚಾಗುತ್ತದೆ. ರಾತ್ರಿ ವಿನೇಶ್‌ನ ತೂಕ ಹೆಚ್ಚಾದಾಗ ಕಡಿಮೆ ಮಾಡಲು ವೈದ್ಯಕೀಯ ತಂಡ ಅನೇಕ ಪ್ರಯತ್ನ ಮಾಡಿತು, ಅವರ ಕೂದಲು ಹಾಗೂ ಉಗುರುಗಳನ್ನು ಕತ್ತರಿಸಲಾಯಿತು. ಆದರೆ ಬೆಳಿಗ್ಗೆ 7 ಗಂಟೆಗೆ ಅವರನ್ನು ತೂಕ ಮಾಡಿದಾಗ, ಅವರು ನಿಗದಿಗಿಂದ 100 ಗ್ರಾಂ ಹೆಚ್ಚು ತೂಕ ಇರುವುದು ಕಂಡುಬಂತು ಎಂದಿದ್ದಾರೆ.