ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಮಿಜೊರಾಂ ತಂಡವನ್ನು ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ. ಲೀಗ್‌ನಲ್ಲಿ ಒಟ್ಟು 7 ಪಂದ್ಯಗಳಲ್ಲಿ ಕಣಕ್ಕಿಳಿದ ಕರ್ನಾಟಕ 6 ಪಂದ್ಯಗಳಲ್ಲಿ ಗೆದ್ದಿದ್ದು, ಒಂದು ಪಂದ್ಯದಲ್ಲಿ ಸೋತು ಅಂಕಪಟ್ಟಿಯಲ್ಲಿ 24 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಲೀಗ್ ಹಂತದಲ್ಲಿ ಕಣಕ್ಕಿಳಿದ ಎಲ್ಲಾ 7 ಪಂದ್ಯಗಳನ್ನು ಗೆದ್ದ ಹರಿಯಾಣ ಅಂಕಪಟ್ಟಿಯಲ್ಲಿ 28 ಅಂಕಗಳನ್ನು ಪಡೆದುಕೊಂಡು ಅಗ್ರಸ್ಥಾನದಲ್ಲಿದೆ.
ನಿನ್ನೆ ( ಡಿಸೆಂಬರ್ 5 ) ಅಹ್ಮದಾಬಾದ್‌ನ ಗುಜರಾತ್ ಕಾಲೇಜು ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಿಜೊರಾಂ 37.2 ಓವರ್‌ಗಳಲ್ಲಿ 124 ರನ್ ಕಲೆಹಾಕಿ ಆಲ್‌ಔಟ್ ಆಗಿ ಕರ್ನಾಟಕ ತಂಡಕ್ಕೆ ಗೆಲ್ಲಲು 125 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಕರ್ನಾಟಕ 17.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿತು.
ಕರ್ನಾಟಕದ ಪರ ಬೌಲಿಂಗ್‌ನಲ್ಲಿ ವಾಸುಕಿ ಕೌಶಿಕ್ 4 ವಿಕೆಟ್ ಪಡೆದು ಮಿಂಚಿದರು, ಕೃಷ್ಣಪ್ಪ ಗೌತಮ್ 3 ವಿಕೆಟ್, ಮನೋಜ್ ಭಂಡಗೆ 2 ವಿಕೆಟ್ ಹಾಗೂ ಮುರಳೀಧರ ವೆಂಕಟೇಶ್ ಒಂದು ವಿಕೆಟ್ ಪಡೆದರು. ಬ್ಯಾಟಿಂಗ್‌ನಲ್ಲಿ ನಾಯಕ ಮಯಾಂಕ್ ಅಗರ್ವಾಲ್ ಅಜೇಯ 48 ಹಾಗೂ ಮನೀಶ್ ಪಾಂಡೆ ಅಜೇಯ 38 ರನ್ ಕಲೆಹಾಕಿದರು.
ಕ್ವಾರ್ಟರ್ ಫೈನಲ್ ಸೆಣಸಾಟ ಹೀಗಿರಲಿದೆ:
ಕರ್ನಾಟಕ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ವಿದರ್ಭ ತಂಡದ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯ ರಾಜ್‌ಕೋಟ್‌ನ ಸನೋಸರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್‌ಗೆ ಪ್ರವೇಶಿಸಲಿದೆ. ವಿದರ್ಧ ತಂಡ ಲೀಗ್‌ನಲ್ಲಿ ಕಣಕ್ಕಿಳಿದಿದ್ದ ತನ್ನ ಒಟ್ಟು 7 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿತ್ತು.