Mysore
20
clear sky

Social Media

ಭಾನುವಾರ, 21 ಡಿಸೆಂಬರ್ 2025
Light
Dark

vijay hazare: ಫೈನಲ್‌ ಲಗ್ಗೆಯಿಟ್ಟ ರಾಜಸ್ಥಾನ; ಕರ್ನಾಟಕಕ್ಕೆ ನಿರಾಸೆ

ರಾಜ್‌ಕೋಟ್‌ : ನಾಯಕ ದೀಪಕ್‌ ಹೂಡಾ ಅವರ ಅಮೋಘ ಶತಕದ ಬಲದಿಂದ ರಾಜಸ್ಥಾನ ತಂಡ ಅದ್ದೂರಿ ಜಯ ದಾಖಲಿಸಿದೆ.

ಇಲ್ಲನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ವಿಜಯ್​ ಹಜಾರೆ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ 6 ವಿಕೆಟ್‌ಗಳ ಜಯಭೇರಿ ಬಾರಿಸಿದ ರಾಜಸ್ಥಾನ್ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಆರ್‌. ಸಮರ್ಥ್ (8) ಹಾಗೂ ಮಯಾಂಕ್ ಅಗರ್ವಾಲ್ (13) ಬೇಗನೆ ವಿಕೆಟ್ ಒಪ್ಪಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕಿನ್ ಜೋಸ್ 21 ರನ್​ಗಳಿಸಲಷ್ಟೇ ಶಕ್ತರಾದರು. ಕೃಷ್ಣನ್ ಶ್ರೀಜಿತ್ 45 ಎಸೆತಗಳಲ್ಲಿ 37 ರನ್ ಬಾರಿಸಿ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಿ ನಿಂತರು. ಇನ್ನು ಮನೀಶ್ ಪಾಂಡೆ 28 ರನ್​ಗಳ ಕೊಡುಗೆ ನೀಡಿದರು.

ತಂಡಕ್ಕೆ ಆಸರೆಯಾಗಿ ಬಿರುಸಿನ ಬ್ಯಾಟಿಂಗ್​ ಮಾಡಿದ ಅಭಿನವ್ ಮನೋಹರ್ 80 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 91 ರನ್ ಬಾರಿಸಿದರು. ಇನ್ನು ಮನೋಜ್ ಭಾಂಡಗೆ 39 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 63 ರನ್ ಚಚ್ಚಿದರು.

ಕರ್ನಾಟಕ ತಂಡ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 282 ರನ್ ಕಲೆಹಾಕಿತು. ರಾಜಸ್ಥಾನ್‌ ಪರ ಅನಿಕೇತ್‌ ಚೌಧರಿ ಮತ್ತು ಅಜಯ್‌ ಸಿಂಗ್‌ ತಲಾ 2 ವಿಕೆಟ್‌ ಪಡೆದರು.

ಈ ಬೃಹತ್‌ ಮೊತ್ತ ಚೇಸ್‌ ಮಾಡಲು ಹೊರಟ ರಾಜಸ್ಥಾನ್‌ಗೆ ಆರಂಭಿಕ ಆಘಾತ ಎದುರಾಯಿತು. ಆರಂಭೀಕ ಆಟಗಾರರಾದ ಅಭಿಜಿತ್‌ ತೋಮರ್‌ ಮತ್ತು ರಾಮ್‌ ಮೊಹನ್‌ ಚೌಹಾಣ್‌ ಖಾತೆ ತೆರೆಯದೆ ಹಿಂದುರಿಗಿದರು. ಲೋಮ್‌ರೋರ್‌ (14) ರನ್‌ಗಳಿಸಿ ನಿರ್ಗಮಿಸಿದರು.

ನಂತರ ಜೊತೆಯಾದ ನಾಯಕ ದೀಪಕ್‌ ಹೂಡಾ ಮತ್ತು ಕರಣ್‌ ಲಂಬಾ ತಂಡದ ದಿಕ್ಕನ್ನೇ ಬದಲಿಸಿದರು. ಕರ್ನಾಟಕದ ದಿಟ್ಟ ಬೌಲಿಂಗ್‌ ಎದುರಿಸಿದ ನಾಯಕ ಹೂಡಾ ತಾವೆದುರಿಸಿದ 128 ಎಸೆತಗಳಲ್ಲಿ 19 ಬೌಂಡರಿ ಮತ್ತು 5 ಸಿಕ್ಸರ್‌ ಸಹಿತ ಬರೋಬ್ಬರಿ 180ರನ್‌ ಕಲೆಹಾಕಿದರು. ಇತ್ತ ನಾಯಕನಿಗೆ ಬೆಂಬಲ ನೀಡಿದ ಕರಣ್‌ ಲಂಬಾ 73ರನ್‌ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ರಾಜಸ್ಥಾನ 43.4 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 283 ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.

ಪಂದ್ಯ ಶ್ರೇಷ್ಠ : ದೀಪಕ್‌ ಹೂಡಾ.

* ಡಿಸೆಂಬರ್‌ 16 ರಂದು ಹರ್ಯಾಣ ವಿರುದ್ದ ರಾಜಸ್ಥಾನ ಫೈನಲ್‌ ಪಂದ್ಯ ಆಡಲಿದೆ.
ಈ ಪಂದ್ಯವು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಮದ್ಯಾಹ್ನ 1.30 ಕ್ಕೆ ನಡೆಯಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!