ಬ್ಲೋಮ್‌ಫಾಂಟೈನ್: ಐದು ಬಾರಿಯ ವಿಶ್ವ ಚಾಂಪಿಯನ್ ಭಾರತ ತಂಡ, ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಇಂದು ಮೊದಲ ಪಂದ್ಯ ಆಡಲಿದೆ. ಇಲ್ಲಿನ ಬ್ಲೋಮ್‌ಫಾಂಟೈನ್‌ನ ಮನ್ಗುನ್ಯಾಗ್ ಓವಲ್ ಮೈದಾನದಲ್ಲಿ ಬಾಂಗ್ಲಾದೇಶ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ.
ಈ ಪಂದ್ಯವು ಭಾರತೀಯ ಕಾಲಮಾನ ಮದ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಉದಯ್ ಸಹರನ್ ನಾಯಕತ್ವದಲ್ಲಿ ಟೀಂ ಇಂಡಿಯಾ ಇಂದು ಕಣಕ್ಕಿಳಿಯಲಿದ್ದು, ಆರನೇ ಪ್ರಶಸ್ತಿಯತ್ತ ಚಿತ್ತ ನೆಟ್ಟಿದೆ. 2022 ರಲ್ಲಿ ಯಶ್ ಧುಲ್ ನಾಯಕತ್ವದಲ್ಲಿ ಭಾರತವು ದಾಖಲೆಯ 5 ನೇ ಬಾರಿಗೆ ಟ್ರೋಫಿ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿ ಜನವರಿ 19 ರಿಂದ ಆರಂಭವಾಗಿದ್ದು, ದಕ್ಷಿಣ ಆಫ್ರಿಕಾ ಈ ಟೂರ್ನಿಯ ಆತಿಥ್ಯ ವಹಿಸಿದೆ. ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಅಮೆಕರಿಕಾ ವಿರುದ್ಧ ಐರ್ಲೆಂಡ್ 7 ವಿಕೆಟ್ಗಳಿಂದ ಜಯಿಸಿದರೆ, ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಫ್ರಿಕಾ 31 ರನ್ಗಳ ಜಯಗಳಿಸಿ ಶುಭಾರಂಭ ಮಾಡಿದೆ.
ಇಂದು (ಜನವರಿ 20) ಮೂರು ಪಂದ್ಯಗಳು ನಡೆಯಲಿವೆ. ಮೊದಲಿಗೆ ಭಾರತ ಹಾಗೂ ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ನಂತರ ಸ್ಕಾಟ್ಲೆಂಡ್-ಇಂಗ್ಲೆಂಡ್ ಮತ್ತು ಪಾಕಿಸ್ತಾನ-ಅಫ್ಘಾನಿಸ್ತಾನ ಗೆಲುವಿಗಾಗಿ ಸೆಣೆಸಾಟ ನಡೆಸಲಿದೆ.
ಭಾರತ ಮತ್ತು ಬಾಂಗ್ಲಾ ನಡುವಿನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ವೀಕ್ಷಣೆ ಮಾಡಬಹುದು.
ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತವೆ.
ಟೀಂ ಇಂಡಿಯಾ (ಅಂಡರ್-19): ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಉದಯ್ ಸಹರನ್ (ನಾಯಕ), ಅರವೆಲ್ಲಿ ಅವ್ನಿಶ್ ರಾವ್ (ವಿಕೆಟ್ ಕೀಪರ್), ಸೌಮ್ಯ ಕುಮಾರ್ ಪಾಂಡೆ (ಉಪನಾಯಕ), ಮುರುಗನ್ ಅಭಿಷೇಕ್, ಇನೇಶ್ ಮಹಾಜನ (ವಿಕೆಟ್ ಕೀಪರ್), ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.
ಬಾಂಗ್ಲಾದೇಶ ತಂಡ (ಅಂಡರ್-19): ಮಹ್ಫುಜುರ್ ರಹಮಾನ್ ರಬ್ಬಿ (ನಾಯಕ), ಆಶಿಕುರ್ ರೆಹಮಾನ್ ಶಿಬ್ಲಿ, ಜಿಶಾನ್ ಆಲಂ, ಚೌಧರಿ ಮೊಹಮ್ಮದ್ ರಿಜ್ವಾನ್, ಆದಿಲ್ ಬಿನ್ ಸಿದ್ದಿಕ್, ಮೊಹಮ್ಮದ್ ಅಶ್ರಫುಜ್ಜಮಾನ್ ಬೊರಾನೊ, ಅರಿಫುಲ್ ಇಸ್ಲಾಂ, ಶಿಹಾಬ್ ಜೇಮ್ಸ್, ಅಹ್ರಾರ್ ಅಮೀನ್ (ಉಪನಾಯಕ), ಶೇಖ್, ಪರ್ವೇಜ್ ಉಜಿ ರೋಹನತ್ ದೌಲಾ.ಬೋರ್ಸನ್, ಇಕ್ಬಾಲ್ ಹಸನ್ ಎಮನ್, ವಾಸಿ ಸಿದ್ದಿಕಿ, ಮರೂಫ್ ಮೃಧಾ.





