ನವದೆಹಲಿ : 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಡಿಫೆಂಡಿಂಗ್ ಚಾಂಪಿಯನ್ಸ್ ಇಂಗ್ಲೆಂಡ್ ಆಡಿದ ಮೊದಲ ಮೂರು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಸೋತು ಕಂಗಾಲಾಗಿದೆ.
ಅದರಲ್ಲೂ ಭಾನುವಾರ (ಅ.15) ನಡೆದ ಪಂದ್ಯದಲ್ಲಿ ಕ್ರಿಕೆಟ್ ಕೂಸು ಅಫಘಾನಿಸ್ತಾನ ಎದುರು 69 ರನ್‌ಗಳ ಹೀನಾಯ ಸೋಲುಂಡಿತು. ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್‌ನ ಮಾಜಿ ಆಟಗಾರ ಮೈಕಲ್ ಅಥರ್ಟನ್ ಟೀಕಾಸ್ತ್ರ ಪ್ರಯೋಗ ಮಾಡಿದ್ದಾರೆ. ಜೋಸ್ ಬಟ್ಲರ್ ಸಾರಥ್ಯದ ಇಂಗ್ಲೆಂಡ್ ತಂಡದಲ್ಲಿ ಅರೆಬೆಂದ ಆಟಗಾರರೇ ಹೆಚ್ಚಿದ್ದಾರೆ ಎಂದು ಜಾಡಿಸಿದ್ದಾರೆ.
“ಇಂಗ್ಲೆಂಡ್ ತಂಡ ಪ್ರಸಕ್ತ ಟೂರ್ನಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬೌಲಿಂಗ್ ಮಾಡಿಲ್ಲ. ತಂಡದ ಮೊದಲು ಈ ವಿಭಾಗದಲ್ಲಿ ಸುಧಾರಣೆ ತಂದುಕೊಳ್ಳುವ ಅಗತ್ಯವಿದೆ. ವಿಕೆಟ್ ವಿಚಾರದಲ್ಲಿ ತಂಡದಲ್ಲಿ ಬಹುತೇಕ ಅರೆಬೆಂದ ಆಟಗಾರರೇ ಹೆಚ್ಚಿದ್ದಾರೆ. ಒಡಿಐ ಕ್ರಿಕೆಟ್‌ನಲ್ಲಿ ಪಳಗಿದಂತೆ ಕಾಣಿಸುತ್ತಿಲ್ಲ. ಲಯ ಕಂಡುಕೊಳ್ಳಲು ಸಂಪೂರ್ಣ ವಿಫಲವಾಗಿದೆ. ಇಂಗ್ಲೆಂಡ್ ತಂಡ ತನ್ನ ಹಾದಿಯನ್ನು ತಾನೇ ಕಠಿಣವನ್ನಾಗಿಸಿಕೊಂಡಿದೆ,” ಎಂದು ಸಕ್ಯೂ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮೈಕಲ್ ಅಥರ್ಟನ್ ಮಾತನಾಡಿದ್ದಾರೆ.
“ಅಫಘಾನಿಸ್ತಾನ ತಂಡ ಅಕ್ಷರಶಃ ಇಂಗ್ಲೆಂಡ್ ತಂಡಕ್ಕಿಂತಲೂ ಅತ್ಯುತ್ತಮ ಆಟವಾಡಿದೆ. ಸ್ಪಿನ್ನರ್‌ಗಳಿಗೆ ನೆರವಾಗುತ್ತಿದ್ದಂತಹ ಪಿಚ್‌ನಲ್ಲಿ ಅವರು ಇಂಗ್ಲೆಂಡ್ ವಿರುದ್ಧ ಜಯ ದಾಖಲಿಸಿದ ಪಂದ್ಯ ಇದಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಹೇಳಿ ಮಾಡಿಸಿದ ಉತ್ತಮ ಪಿಚ್ ಅದಾಗಿತ್ತು. ಅಲ್ಲಿ ನಿಜಕ್ಕೂ ಶ್ರೇಷ್ಠ ಆಟವಾಡಿ ಅಫಘಾನಿಸ್ತಾನ ತಂಡ ಐತಿಹಾಸಿಕ ಜಯ ದಕ್ಕಿಸಿಕೊಂಡಿದೆ,” ಎಂದು ಅಥರ್ಟನ್ ಅಫಘಾನಿಸ್ತಾನ ತಂಡದ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.





