ನವದೆಹಲಿ : ಚುನಾವಣೆಗಳನ್ನು ನಡೆಸಲು ವಿಫಲವಾಗಿರುವ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯು ಎಫ್ ಐ)ಅನ್ನು ವಿಶ್ವ ಕುಸ್ತಿ ಸಂಸ್ಥೆ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಗುರುವಾರ ಅಮಾನತುಗೊಳಿಸಿದೆ. ಈ ಬೆಳವಣಿಗೆಯು ಮುಂಬರುವ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ಧ್ವಜದ ಅಡಿಯಲ್ಲಿ ಸ್ಪರ್ಧಿಸಲು ಭಾರತೀಯ ಕುಸ್ತಿಪಟುಗಳಿಗೆ ಅವಕಾಶ ನೀಡುವುದಿಲ್ಲ.
ಭೂಪೇಂದರ್ ಸಿಂಗ್ ಬಜ್ವಾ ನೇತೃತ್ವದ ತಾತ್ಕಾಲಿಕ ಸಮಿತಿಯು ಚುನಾವಣೆಗಳನ್ನು ನಡೆಸಲು ವಿಶ್ವ ಕುಸ್ತಿ ಸಂಸ್ಥೆ ನೀಡಿದ 45 ದಿನಗಳ ಗಡುವನ್ನು ಗೌರವಿಸದ ಕಾರಣ ಸೆಪ್ಟೆಂಬರ್ 16 ರಿಂದ ಆರಂಭವಾಗುವ ಒಲಿಂಪಿಕ್ ಅರ್ಹತಾ ಟೂರ್ನಿಯಾಗಿರುವ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ಕುಸ್ತಿಪಟುಗಳು ‘ತಟಸ್ಥ ಅಥ್ಲೀಟ್ಗಳಾಗಿ’ ಸ್ಪರ್ಧಿಸಬೇಕಾಗುತ್ತದೆ.
ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ನ ಹಂಗಾಮಿ ಸಿಇಒ ಕಲ್ಯಾಣ್ ಚೌಬೆ ಅವರು ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕುಸ್ತಿಪಟುಗಳು ಭಾಗವಹಿಸುತ್ತಾರೆ ಆದರೂ ಅದು ತಟಸ್ಥವಾಗಿರುತ್ತದೆ ಹಾಗೂ ಅವರು ರಾಷ್ಟ್ರಧ್ವಜದ ಅಡಿಯಲ್ಲಿ ಸ್ಪರ್ದಿಸುವುದಿಲ್ಲ. ಇದಲ್ಲದೆ, ಭಾರತದ ಕುಸ್ತಿಪಟುಗಳು ಪದಕ ಜಯಿಸಿದರೆ ರಾಷ್ಟ್ರಗೀತೆಯನ್ನು ನುಡಿಸಲಾಗುವುದಿಲ್ಲ.
ವಿಶ್ವ ಕುಸ್ತಿ ಸಂಸ್ಥೆಯು ಐಒಎಗೆ ಪತ್ರ ಬರೆದು, ನಿರ್ಧಾರದ ಬಗ್ಗೆ ತಿಳಿಸಿದೆ.
IOA ಸಂವಹನವನ್ನು ಸ್ವೀಕರಿಸಿದೆ ಮತ್ತು ವಿಶ್ವ ಚಾಂಪಿಯನ್ ಶಿಪ್ ಗಾಗಿ ತಂಡಗಳ ಆಯ್ಕೆ ಸೇರಿದಂತೆ ಭವಿಷ್ಯದ ಕ್ರಮವನ್ನು ನಿರ್ಧರಿಸುತ್ತದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





