ನವದೆಹಲಿ: ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಹೋರಾಟವನ್ನು ರಸ್ತೆಗಳ ಮೇಲಲ್ಲ, ನ್ಯಾಯಾಲಯದಲ್ಲಿ ನಡೆಸುತ್ತೇವೆಂದು ಕುಸ್ತಿಪಟುಗಳು ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಸಿಂಗ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸುವ ಭರವಸೆಯನ್ನು ಸರ್ಕಾರ ಈಡೇರಿಸಿದೆ. ಹೀಗಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ. ಆದರೆ, ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ. ಆದರೆ, ಆ ಹೋರಾಟ ರಸ್ತೆಗಳ ಮೇಲಲ್ಲ, ಬದಲಿಗೆ ನ್ಯಾಯಾಲಯದಲ್ಲಿ ಮುಂದುವರೆಯಲಿದೆ ಎಂದು ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಕುಸ್ತಿಪಟುಗಳು, ಡಬ್ಲ್ಯುಎಫ್‍ಐನ ಚುನಾವಣಾ ಪ್ರಕ್ರಿಯೆಯು ಪ್ರಾರಂಭವಾಗಿದೆ. ಜುಲೈ 11 ರ ಚುನಾವಣೆಗೆ ಸರ್ಕಾರ ನೀಡಿರುವ ಭರವಸೆಗಾಗಿ ಕಾಯುತ್ತೇವೆ. ಅಲ್ಲದೇ ಕೆಲವು ದಿನಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ವಿರಾಮ ತೆಗೆದುಕೊಳ್ಳುತ್ತೇವೆಂದು ತಿಳಿಸಿದ್ದಾರೆ.
ಡಬ್ಲ್ಯುಎಫ್‍ಐ ಮುಖ್ಯಸ್ಥರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಏಷ್ಯನ್ ಗೇಮ್ಸ್‍ಗೆ ಮುನ್ನ ತಯಾರಿಗೆ ವಿನಾಯಿತಿ ನೀಡುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ವಿನೇಶ್ ಫೋಗಟ್ ಅವರು ಪತ್ರವೊಂದರ ಚಿತ್ರವನ್ನು ಟ್ವಿಟರ್‍ನಲ್ಲಿ ಹಾಕಿದ್ದಾರೆ. ಈ ಮೂಲಕ ಬಿಜೆಪಿ ಮುಖಂಡ ಹಾಗೂ ಮಾಜಿ ಕುಸ್ತಿಪಟು ಯೋಗೇಶ್ವರ್ ದತ್ ಕ್ರೀಡಾ ಸಚಿವಾಲಯದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆಂದು ತಿಳಿದುಬಂದಿದೆ.