Mysore
26
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

IND vs ENG 5th test: ಇಂಗ್ಲೆಂಡ್‌ ವಿರುದ್ಧ 4-1 ರಲ್ಲಿ ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ

ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್‌ ನಡುವಣ ಐದನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯವನ್ನು ಟೀಂ ಇಂಡಿಯಾ ಇನ್ನಿಂಗ್ಸ್‌ ಹಾಗೂ 64 ರನ್‌ ಗಳ ಅಂತರದಿಂದ ಗೆಲುವು ಸಾಧಿಸಿದೆ.

ಆ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ತಂಡವನ್ನು 4-1 ಅಂತರದಲ್ಲಿ ಸೋಲಿಸಿದೆ.

ಟೀಂ ಇಂಡಿಯಾ ನೀಡಿದ್ದ 259 ರನ್‌ ಗಳ ಮುನ್ನಡೆಯನ್ನು ಚೇಸ್‌ ಮಾಡುವಲ್ಲಿ ವಿಫಲವಾದ ಇಂಗ್ಲೆಂಡ್‌ ತಂಡ ಇನ್ನಿಂಗ್ಸ್‌ ಹಾಗೂ 64 ರನ್‌ ಅಂತರದಿಂದ ಸೋಲೊಪ್ಪಿಕೊಂಡಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಇಂಗ್ಲೆಂಡ್‌ 218 ರನ್‌ಗಳಿಗೆ ಇನ್ನಿಂಗ್ಸ್‌ ಮುಗಿಸಿತ್ತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ 477 ರನ್‌ ಕಲೆ ಹಾಕಿ 259ರನ್‌ ಮುನ್ನಡೆ ಕಾಯ್ದುಕೊಂಡಿತ್ತು. ಅಶ್ವಿನ್‌ ಅವರ ಮಾರಕ ಸ್ಪಿನ್‌ ದಾಳಿಗೆ (77/5) ನಲುಗಿದ ಆಂಗ್ಲ ಪಡೆ, ಇದನ್ನು ಚೇಸ್‌ ಮಾಡಲಾಗದೇ 48.1 ಓವರ್‌ಗಳಲ್ಲಿ ಸರ್ವಪತನ ಕಂಡು ಕೇವಲ 195 ರನ್‌ ಗಳಿಸಲಷ್ಟೆ ಶಕ್ತವಾಯಿತು.

ಟೀಂ ಇಂಡಿಯಾ ಪರ ಅಶ್ವಿನ್‌ ಮೂರನೇ ದಿನದಾಟದಲ್ಲಿ ಐದು ವಿಕೆಟ್‌ ಗೊಂಚಲು ಪಡೆದರು. ಇವರಿಗೆ ಸಾಥ್‌ ನೀಡಿದ ಕುಲ್ದೀಪ್‌ ಯಾದವ್‌ ಮತ್ತು ಬುಮ್ರಾ ತಲಾ ಎರಡು ವಿಕೆಟ್‌ ಕಿತ್ತು ಪಂದ್ಯ ಗೆಲ್ಲಲು ಕಾರಣರಾದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಜೋ ರೂಟ್‌ 84 ರನ್‌ ಬಾರಿಸಿದ್ದೇ ವಯಕ್ತಿಕ ಗರಿಷ್ಟ ರನ್‌ ಆಗಿತ್ತು. ಜಾನಿ ಬೇರ್‌ಸ್ಟೋ 39, ಟಾಮ್‌ ಹಾರ್ಟ್ಲಿ 20, ಪೋಪ್‌ 19 ರನ್‌ ಬಾರಿಸಿದರು. ನಾಯಕ ಸ್ಟೋಕ್ಸ್‌ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬರಲಿಲ್ಲ.

ಸರಣಿಯುದ್ದಕ್ಕೂ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗದಲ್ಲಿ ಹೀನಾಯ ಪ್ರದರ್ಶನ ತೋರಿದ ಇಂಗ್ಲೆಂಡ್‌ ತಂಡ ಸರಣಿಯನ್ನು 4-1 ಅಂತರದಿಂದ ಸೋತಿದೆ.

ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಕುಲ್ದೀಪ್‌ ಯಾದವ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇನ್ನು ಈ ಸರಣಿಯುದ್ದಕ್ಕೂ ಉತ್ತಮ ಬ್ಯಾಟಿಂಗ್‌ ಮಾಡಿದ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ಗೆ ಟೆಸ್ಟ್‌ನಲ್ಲಿ ಮೊದಲ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತು.

 

ಸ್ಕೋರ್‌ ವಿವರ: 

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌: 218/10 ( ಜಾಕ್‌ ಕ್ರಾಲಿ 79, ಕುಲ್ದೀಪ್‌ ಯಾದವ್‌ 72/5 ಮತ್ತು ಅಶ್ವಿನ್‌ 51/4)

ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌: 477/10 (ಶುಭ್‌ಮನ್‌ ಗಿಲ್‌ 110, ರೋಹಿತ್‌ ಶರ್ಮಾ 103, ಬಷೀರ್‌ 173/5)

ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌: 195/10 ( ಜೋ ರೂಟ್‌ 84, ಅಶ್ವಿನ್‌ 77/5 ಕುಲ್ದೀಪ್‌ ಯಾದವ್‌ 40/2, ಬುಮ್ರಾ 38/2)

ಪಂದ್ಯ ಶ್ರೇಷ್ಠ: ಕುಲ್ದೀಪ್‌ ಯಾದವ್‌
ಸರಣಿ ಶ್ರೇಷ್ಠ: ಯಶಸ್ವಿ ಜೈಸ್ವಾಲ್‌

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!