ಕ್ರಿಕೆಟ್‌ನ ಪ್ರತಿಷ್ಠಿತ ಟೆಸ್ಟ್ ಟೂರ್ನಿಯಲ್ಲಿ ಒಂದಾಗಿರುವ ಬಾರ್ಡರ್-ಗವಾಸ್ಕರ್ ಟೂರ್ನಿಯು ಇದೇ ತಿಂಗಳ.22ರಂದು ಶುರುವಾಗಲಿದೆ. ಈ ಟೂರ್ನಿಯ ಆತಿಥ್ಯವನ್ನು ಆಸ್ಟ್ರೇಲಿಯಾ ವಹಿಸಿಕೊಂಡಿದ್ದು, ಮೊದಲ ಪಂದ್ಯ ಪರ್ತ್‌ನಲ್ಲಿ ಜರುಗಲಿದೆ.
ವೈಯಕ್ತಿಕ ಕಾರಣದಿಂದಾಗಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಿಂದ ದೂರ ಉಳಿದಿದ್ದು, ತಂಡವನ್ನು ಜಸ್ಪ್ರಿತ್ ಬುಮ್ರಾ ಮುನ್ನಡೆಸಲಿದ್ದಾರೆ.
ರೋಹಿತ್ ಗೈರು ಹಾಜರಿಯಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆ ಟೀಂ ಇಂಡಿಯಾಗೆ ಕಾಡತೊಡಗಿದೆ.
ವರ್ಷದ ಆರಂಭದಿಂದಲೂ ಉತ್ತಮ ಲಯದಲ್ಲಿರುವ ಯಶಸ್ವಿ ಜೈಸ್ವಾಲ್ ಆಸ್ಟ್ರೇಲಿಯಾದಲ್ಲಿ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಆದರೆ ಮತ್ತೊಂದು ತುದಿಯಲ್ಲಿ ಕಣಕ್ಕಿಳಿಯುವವರ ಕೊರತೆ ಟೀಂ ಇಂಡಿಯಾಗೆ ಎದ್ದು ಕಾಣುತ್ತಿದೆ.
ರೋಹಿತ್ ಅಲಭ್ಯದಿಂದ ಶುಭ್‌ಮನ್ ಗಿಲ್ ಆರಂಭಿಕ ಬ್ಯಾಟರ್ ಆಗಿ ಕಣಕಿಳಿಯುತ್ತಿದ್ದರು.ಆದರೆ ಹೆಬ್ಬೆರಳಿನ ಗಾಯದಿಂದ ಅವರು ಈ ಪಂದ್ಯದಿಂದ ಹೊರಗುಳಿದಿರುವ ಕಾರಣ ಹೊಸ ಆರಂಭಿಕನಿಗೆ ಮಣೆ ಹಾಕುವ ಸಾಧ್ಯತೆ ಇದೆ.
ಟೀಂ ಇಂಡಿಯಾದ ಆರಂಭಿಕನಾಗಿ ಅನುಭವ ಹೊಂದಿರುವ ಕೆ.ಎಲ್.ರಾಹುಲ್ ವಿದೇಶದ ಪಿಚ್‌ನಲ್ಲಿ ಉತ್ತಮವಾಗಿ ಆಡಿದ್ದಾರೆ. ಇವರು ಆರಂಭಿಕನಾಗಿ ಕಣಕ್ಕಿಳಿದರೆ ಮಧ್ಯಮ ಕ್ರಮಾಂಕ ದುರ್ಬಲವಾಗುವುದರಿಂದ ಅಭಿಮನ್ಯು ಈಶ್ವರನ್ ಟೀಂ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
ಪ್ರಥಮ ದರ್ಜೆ ಪಂದ್ಯಗಳಲ್ಲಿ ಉತ್ತಮ ಆಟವಾಡಿರುವ ಅಭಿಮನ್ಯು, 101 ಪಂದ್ಯಗಳಿಂದ 27 ಶತಕ ಹಾಗೂ 29 ಅರ್ಧಶತಕಗಳೊಂದಿಗೆ ಒಟ್ಟು 7674 ರನ್ ಕಲೆ ಹಾಕಿದ್ದಾರೆ.
ಭಾರತ ಟೆಸ್ಟ್ ತಂಡ : ರೋಹಿತ್ ಶರ್ಮಾ(ನಾಯಕ), ಜಸ್‌ಪ್ರೀತ್ ಬುಮ್ರಾ(ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್(ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಧ್ರುವ ಜುರೆಲ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ ಕೃಷ್ಣ, ಹರ್ಷಿತ್ ರಾಣಾ, ನತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.





