Mysore
20
overcast clouds
Light
Dark

ICC T20 WC FINAL| ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಟ್ರೋಫಿಗೆ ಮುತ್ತಿಟ್ಟ ರೋಹಿತ್‌ ಪಡೆ!

ಬಾರ್ಬಡೋಸ್‌: ಸಂಘಟಿತ ಬ್ಯಾಟಿಂಗ್‌ ಬೌಲಿಂಗ್‌ ನೆರವಿನಿಂದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಅಂತರದಿಂದ ಭಾರತ ತಂಡ ಗೆಲುವು ದಾಖಲಿತು. ಆ ಮೂಲಕ ರೋಹಿತ್‌ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಟ್ರೋಫಿಗೆ ಮುತ್ತಿಕ್ಕುವ ಮೂಲಕ ದಶಕಗಳ ಟ್ರೋಫಿ ಬರಕ್ಕೆ ಬ್ರೇಕ್‌ ಹಾಕಿತು.

ಇತ್ತ ಟೀಂ ಇಂಡಿಯಾ ವಿರುದ್ಧ ಸೋತ ಸೌಥ್‌ ಆಫ್ರಿಕಾ ತಂಡದ ಚೊಚ್ಚಲ ಟ್ರೋಫಿ ಎತ್ತುವ ಕನಸು ಕನಸಾಗಿಯೇ ಉಳಿಯಿತು.

ಇಲ್ಲಿನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 176 ರನ್‌ ಬಾರಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ 177 ರನ್‌ ಗಳ ಸವಾಲಿನ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಕ್ಲಾಸೆನ್‌ ಅವರ ಅರ್ಧಶತಕ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 169 ರನ್‌ ಬಾರಿಸಿ 7 ರನ್‌ಗಳ ಅಂತರದಿಂದ ಸೋಲುವ ಮೂಲಕ ಮತ್ತೊಮ್ಮೆ ನಿರಾಸೆ ಅನುಭವಿಸಿತು.

ಟೀಂ ಇಂಡಿಯಾ ಇನ್ನಿಂಗ್ಸ್‌: ಟೀಂ ಇಂಡಿಯಾ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿತು. ಹರಿಣಗಳ ಶಿಸ್ತುಬದ್ಧ ಬೌಲಿಂಗ್‌ ದಾಳಿಗೆ ಪ್ರತ್ಯುತ್ತರವಾಗಿ ಟೀಂ ಇಂಡಿಯಾದ ರನ್‌ ಮೆಷಿನ್‌ ಬ್ಯಾಟ್‌ ಬೀಸಿದರು. ನಿಧಾನಗತಿಯಿಂದ ಇನ್ನಿಂಗ್ಸ್‌ ಕಟ್ಟಿದ ವಿರಾಟ್‌ 59 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 76 ರನ್‌ ಗಳಿಸಿದರು. ಇವರಿಗೆ ಶಿವಂ ದುಬೆ 27(16) ರನ್‌ ಬಾರಿಸಿ ವಿರಾಟ್‌ಗೆ ಸಾಥ್‌ ನೀಡಿದರು.

ಉಳಿದಂತೆ ಅಕ್ಷರ್‌ ಪಟೇಲ್‌ 47(31) ರನ್‌, ನಾಯಕ ರೋಹಿತ್‌ ಶರ್ಮಾ 9(5) ರನ್‌, ರಿಷಭ್‌ ಪಂತ್‌ ಡಕ್‌ಔಟ್‌, ಸೂರ್ಯಕುಮಾರ್‌ ಯಾದವ್‌ 3(4)ರನ್‌, ಹಾರ್ದಿಕ್‌ ಪಾಂಡ್ಯ ಔಟಾಗದೇ 5(2) ರನ್‌, ರವೀಂದ್ರ ಜಡೇಜಾ 2(2) ರನ್‌ ಕಲೆಹಾಕಿದರು.

ದಕ್ಷಿಣ ಆಫ್ರಿಕಾ ಪರ ಕೇಶವ್‌ ಮಹಾರಾಜ್‌ ಹಾಗೂ ನೋಕಿಯೋ 2, ರಬಾಡ ಮತ್ತ ಮಾರ್ಕೋ ಎನ್ಸರ್‌ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌: ಸವಾಲಿನ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಹೆನ್ರಿಕ್‌ 4(5) ರನ್‌ ಗಳಿಸಿ ಮೊದಲ ಓವರ್‌ನಲ್ಲೇ ಬುಮ್ರಾಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. ಬಳಿಕ ಬಂದ ನಾಯಕ ಐಡೆನ್‌ ಮಾರ್ಕ್ರಂ 4(5)ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ತಂಡ ಸಂಕಷ್ಟದ ಸ್ಥಿತಿಯಲ್ಲಿದ್ದಾಗ ಡಿಕಾಕ್‌ 39(31)ರನ್‌ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ 31(21) ರನ್‌ ಗಳಿಸಿ ಚೇತರಿಕೆಯ ಆಟವಾಡಿದರು.

ಬಳಿಕ ಒಂದಾದ ಕ್ಲಾಸೆನ್‌ ಹಾಗೂ ಮಿಲ್ಲರ್‌ ಜೋಡಿ ಅರ್ಧಶತಕ ಜತೆಯಾಟ ಆಡುವ ಮೂಲಕ ಭಾರತ ತಂಡದ ಬೌಲರ್‌ಗಳನ್ನು ಕಾಡಿದರು. ಹೆನ್ರಿಕ್ಸ್‌ ಕ್ಲಾಸೆನ್‌ 27 ಎಸೆತಗಳಲ್ಲಿ 2 ಬೌಂಡರಿ ಹಾಗೂ ಭರ್ಜರಿ 5 ಸಿಕ್ಸರ್‌ ಸಹಿತ 52 ರನ್‌ ಬಾರಿಸಿದರು. ಮಾರ್ಕೋ ಎನ್ಸನ್‌ 2(4) ರನ್‌,

ಆದರೆ ಕೊನೆಯವರೆಗೂ ನಿಂತು ಹೋರಾಡಿದ ಡೇವಿಡ್‌ ಮಿಲ್ಲರ್‌ 21(17) ರನ್‌ ಗಳಿಸಿಯೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಉಳಿದಂತೆ ರಬಾಡ 4(3) ರನ್‌, ಕೇಶವ್‌ ಮಹಾರಾಜ್‌ ಔಟಾಗದೇ 2(7)ರನ್‌ ಹಾಗೂ ನೋಕಿಯೋ 1(1) ರನ್‌ ಗಳಿಸಿದರು.

ಟೀಂ ಇಂಡಿಯಾ ಪರ ಹಾರ್ದಿಕ್‌ ಪಾಂಡ್ಯ 3, ಅರ್ಷ್‌ದೀಪ್‌ ಸಿಂಗ್‌ ಹಾಗೂ ಜಸ್‌ಪ್ರಿತ್‌ ಬುಮ್ರಾ ತಲಾ 2 ವಿಕೆಟ್‌, ಅಕ್ಷರ್‌ ಪಟೇಲ್‌ ಒಂದು ವಿಕೆಟ್‌ ಕಬಳಿಸಿ ಮಿಂಚಿದರು.