ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಸಮರ ಗೆದ್ದು ಎರಡನೇ ಬಾರಿಗೆ ಟೀ20 ವಿಶ್ವಕಪ್ ಮುಡಿಗೇರಿಸಿಕೊಂಡ ರೋಹಿತ್ ಶರ್ಮ ಬಳಗಕ್ಕೆ ಬಿಸಿಸಿಐ ಭಾನುವಾರ(ಜೂ.30) ಬಹುಮಾನ ಘೋಷಿಸಿದೆ.
ಬಿಸಿಸಿಐ ಕಾರ್ಯದರ್ಶಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಲ್ ಅಧ್ಯಕ್ಷ ಜಯ್ ಶಾ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಭರ್ಜರಿ ಬಹುಮಾನ ಘೋಷಿಸಿದ್ದಾರೆ. ವಿಜೇತ ತಂಡಕ್ಕೆ ಬರೊಬ್ಬರಿ 125 ಕೋಟಿ ರೂ ಬಹುಮಾನ ಘೋಷಿಸಿ ಭಾರತದ ಅತ್ಯುತ್ತಮ ಸಾಧನೆಗೆ ನೀಡಿದ ಕೊಡುಗೆಗಾಗಿ ಆಟಗಾರರು ಮತ್ತು ಎಲ್ಲಾ ಕೋಚಿಂಗ್ ಸಿಬ್ಬಂದಿಯನ್ನು ಅವರು ಅಭಿನಂದಿಸಿದ್ದಾರೆ.
ಐಸಿಸಿ ಪುರುಷರ ಟೀ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಗೆ 125 ಕೋಟಿ ರೂ.ಗಳ ಬಹುಮಾನ ಘೋಷಿಸಲು ನನಗೆ ಸಂತೋಷವಾಗುತ್ತಿದೆ. ತಂಡವು ಪಂದ್ಯಾವಳಿಯ ಉದ್ದಕ್ಕೂ ಅಸಾಧಾರಣ ಪ್ರತಿಭೆ, ದೃಢತೆ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದೆ. ಈ ಅತ್ಯುತ್ತಮ ಸಾಧನೆಗಾಗಿ ಎಲ್ಲ ಆಟಗಾರರು, ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು ಎಂದು ಪೋಸ್ಟ್ ಮಾಡಿದ್ದಾರೆ.





