ಮೆಲ್ಬರ್ನ್: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು 159 ರನ್ ಕಲೆಹಾಕಿದೆ.
ಇಲ್ಲಿನ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಟಿ20 ಮಾದರಿಯಲ್ಲಿ ವಿಶ್ವದ ಶ್ರೇಷ್ಠ ಆರಂಭಿಕ ಜೋಡಿಗಳಲ್ಲಿ ಒಂದೆನಿಸಿರುವ ಮೊಹಮ್ಮದ್ ರಿಜ್ವಾನ್ (4) ಹಾಗೂ ಬಾಬರ್ ಅಜಂ (0) ಪಾಕಿಸ್ತಾನಕ್ಕೆ ಕೈಕೊಟ್ಟರು.
ಯುವ ವೇಗಿ ಅರ್ಶದೀಪ್ ಸಿಂಗ್, ತಂಡದ ಮೊತ್ತ 15 ರನ್ ಆಗುವಷ್ಟರಲ್ಲಿಯೇ ಇವರಿಬ್ಬರಿಗೂ ಪೆವಿಲಿಯನ್ ದಾರಿ ತೋರಿದರು.ಆಸರೆಯಾದ ಮಸೂದ್, ಇಫ್ತಿಕರ್ ಈ ಹಂತದಲ್ಲಿ ಜೊತೆಯಾದ ಶಾನ್ ಮಸೂದ್ ಮತ್ತು ಇಫ್ತಿಕರ್ ಅಹಮದ್ ವಿಕೆಟ್ ಉರುಳುವಿಕೆಗೆ ತಡೆಯೊಡ್ಡಿದರು. ಆರಂಭದಲ್ಲಿ ರಕ್ಷಣಾತ್ಮಕವಾಗಿ ಆಡಿದ ಇವರಿಬ್ಬರು, ನಿಧಾನವಾಗಿ ರನ್ ಗತಿ ಹೆಚ್ಚಿಸಿದರು. ಈ ಜೋಡಿ ಮೂರನೇ ವಿಕೆಟ್ ಪಾಲುದಾರಿಕೆಯಲ್ಲಿ 76ರನ್ ಕಲೆಹಾಕಿತು.ಇಫ್ತಿಕರ್ 34 ಎಸೆತಗಳಲ್ಲಿ 4 ಸಿಕ್ಸರ್ 2 ಬೌಂಡರಿ ಸಹಿತ 51 ರನ್ ಗಳಿಸಿ ಔಟಾದರು. ಆದರೆ, ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್‌ಗೆ ಅಂಟಿಕೊಂಡು ಕೊನೆಯವರೆಗೂ ಆಡಿದ ಮಸೂದ್, ಕೆಳ ಕ್ರಮಾಂಕದ ಬ್ಯಾಟರ್‌ಗಳೊಂದಿಗೆ ರನ್ ಗತಿ ಹೆಚ್ಚಿಸುವ ಪ್ರಯತ್ನ ಮಾಡಿದರು.
42 ಎಸೆತಗಳನ್ನು ಎದುರಿಸಿದ ಮಸೂದ್, 52 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 5 ಬೌಂಡರಿಗಳಿದ್ದವು.ಕೊನೆಯಲ್ಲಿ ಶಾಹಿನ್ ಅಫ್ರಿದಿ (16), ಮಸೂದ್‌ಗೆ ಉತ್ತಮ ಬೆಂಬಲ ನೀಡಿದರು. ಹೀಗಾಗಿ 159 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು.ಭಾರತ ಪರ ಉತ್ತಮವಾಗಿ ಬೌಲಿಂಗ್ ಮಾಡಿದ ಅರ್ಶದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಮೂರು ವಿಕೆಟ್ ಕಬಳಿಸಿದರು. ಇವರಿಬ್ಬರೂ ತಮ್ಮ ಪಾಲಿನ 4 ಓವರ್‌ಗಳಲ್ಲಿ ಕ್ರಮವಾಗಿ 32 ಮತ್ತು 30 ರನ್ ಬಿಟ್ಟುಕೊಟ್ಟರು. ಮತ್ತೆರಡು ವಿಕೆಟ್‌ಗಳನ್ನು ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಹಂಚಿಕೊಂಡರು.