ಲಂಡನ್: ಇಂಗ್ಲೆಂಡ್ ತಂಡದ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಅವರು ಶನಿವಾರ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಹಠಾತ್ ವಿದಾಯ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಆಷಸ್ ಸರಣಿಯ ಐದನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯದಲ್ಲಿ ಬ್ರಾಡ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
“ಇಂಗ್ಲೆಂಡ್ ಕ್ರಿಕೆಟ್‌ಗೆ ನೀಡಿದ ಕೊಡುಗೆ ಹಾಗೂ ತೋರಿದ ಬದ್ದತೆಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯು ಸ್ಟುವರ್ಟ್ ಬ್ರಾಡ್‌ಗೆ ಧನ್ಯವಾದ ಅರ್ಪಿಸಲಿದೆ. ಇದರ ಜತೆಗೆ ತಮ್ಮ ಫೈನಲ್ ಪಂದ್ಯ ಹಾಗೂ ನಿಮ್ಮ ಭವಿಷ್ಯಕ್ಕೆ ಶುಭ ಹಾರೈಸುತ್ತೇವೆ,” ಎಂದು ಇಸಿಬಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
37ರ ಪ್ರಾಯದ ಸ್ಟುವರ್ಟ್ ಬ್ರಾಡ್ ಅವರು ಇಲ್ಲಿಯವರೆಗೂ 167 ಟೆಸ್ಟ್ ಪಂದ್ಯಗಳು, 121 ಏಕದಿನ ಪಂದ್ಯಗಳು ಹಾಗೂ 56 ಟಿ20ಐ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಎಲ್ಲಾ ಸ್ವರೂಪದಲ್ಲಿ ಅವರು 845 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಆಷಸ್ ಟೆಸ್ಟ್ ಸರಣಿಯಲ್ಲಿ ಸ್ಟುವರ್ಟ್ ಬ್ರಾಡ್ (20 ವಿಕೆಟ್‌ಗಳು) ಎರಡನೇ ಅತಿ ಹೆಚ್ಚು ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡಿದ್ದಾರೆ.
600 ಟೆಸ್ಟ್ ವಿಕೆಟ್‌ಗಳ ಸಾಧನೆ : ಜೇಮ್ಸ್ ಆಂಡರ್ಸನ್ ಬಳಿಕ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಇಂಗ್ಲೆಂಡ್‌ನ ಎರಡನೇ ವೇಗದ ಬೌಲರ್ ಎನಿಸಿಕೊಂಡಿದ್ದರು. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬ್ರಾಡ್ ಈ ಸಾಧನೆ ಮಾಡಿದ್ದರು. ಇದರ ಜತೆಗೆ ಗ್ಲೆನ್ ಮೆಗ್ರಾಥ್ ಹಾಗೂ ಶೇನ್ ವಾರ್ನ್ ಬಳಿಕ ಆಷಸ್ ಟೆಸ್ಟ್ ಸರಣಿಯಲ್ಲಿ 150ಕ್ಕೂ ಅಧಿಕ ವಿಕೆಟ್ ಕಿತ್ತ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
3656 ಟೆಸ್ಟ್ ರನ್‌ಗಳು : ವೇಗದ ಬೌಲಿಂಗ್ ಜತೆಗೆ ಕೆಳ ಮಧ್ಯಮ ಕ್ರಮಾಂಕದಲ್ಲಿಯೂ ಬ್ರಾಡ್ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಹಲವು ಬಾರಿ ಆಸರೆಯಾಗಿದ್ದಾರೆ. ಇಲ್ಲಿಯವರೆಗೂ ಅವರು ಟೆಸ್ಟ್‌ನಲ್ಲಿ 18ರ ಸರಾಸರಿಯಲ್ಲಿ 3656 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ಒಂದು ಶತಕ ಹಾಗೂ 13 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಪಾಕಿಸ್ತಾನ ವಿರುದ್ದ 2010ರಲ್ಲಿ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಗಳಿಸಿದ್ದ 169 ರನ್‌ಗಳು ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
2006ರಲ್ಲಿ ಪದಾರ್ಪಣೆ : ಸ್ಟುವರ್ಟ್ ಬ್ರಾಡ್ ಅವರು 2006ರ ಆಗಸ್ಟ್ 28 ರಂದು ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮೈಕಲ್ ವಾನ್ ಅವರು ಬ್ರಾಡ್ ಅವರ ಮೊದಲ ನಾಯಕ. 600 ವಿಕೆಟ್‌ಗಳನ್ನು ಕಬಳಿಸಿದ ಬಳಿಕ ಮೈಕಲ್ ವಾನ್ ಅವರು ಬ್ರಾಡ್ ಅವರಿಗೆ ಶ್ರೀಲಂಕಾ ವಿರುದ್ದ ಚೊಚ್ಚಲ ಟೆಸ್ಟ್ ನೀಡಿದ್ದ ಘಟನೆಯನ್ನು ಸ್ಮರಿಸಿಕೊಂಡಿದ್ದರು.
ಸ್ಟುವರ್ಟ್ ಬ್ರಾಡ್ ಹೇಳಿದ್ದೇನು.? : “ಇದು ನನ್ನ ಪಾಲಿಗೆ ಅದ್ಭುತ ಪಯಣ. ಆಷಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ನನಗೆ ವಿಶೇಷವಾದ ಪ್ರೀತಿ ಇದೆ. ಹಾಗಾಗಿ ತಮ್ಮ ವೃತ್ತಿ ಜೀವನದ ಕೊನೆಯಲ್ಲಿ ಆಷಸ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲ್ ಮಾಡಬೇಕೆಂದು ಅಂದುಕೊಂಡಿದ್ದೇನೆ. ಯಾವುದೇ ವಿಷಾಧವಿಲ್ಲದೆ ಕ್ರಿಕೆಟ್ ಅನ್ನು ತೊರೆಯುತ್ತಿದ್ದೇನೆಂಬ ಭಾವನೆ ನನಗೆ ಉಂಟಾಗಬಾರದು,” ಎಂದು ಸ್ಟುವರ್ಟ್ ಬ್ರಾಡ್ ಹೇಳಿಕೆಯನ್ನುಇಸಿಬಿ ಟ್ವೀಟ್ ಮಾಡಿದೆ.