ಡಂಬುಲ್ಲಾ: ಸಂಘಟಿತ ಬ್ಯಾಟಿಂಗ್ ಹಾಗೂ ಬೌಲಿಂಗ್ ನೆರವಿನಿಂದ ಬಲಿಷ್ಠ ಭಾರತ ತಂಡವನ್ನು ಕಟ್ಟಿಹಾಕುವ ಮೂಲಕ ತವರಿನಂಗಳದಲ್ಲಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿದ್ದಾರೆ.
ಇಲ್ಲಿನ ಡಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿದ ಶ್ರೀಲಂಕಾ ಮೊದಲ ಬಾರಿಗೆ ಏಷ್ಯಾಕಪ್ ಗೆದ್ದು ಬೀಗಿತು.
ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯರ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ 166 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿತು. ತವರಿನಂಗಳದಲ್ಲಿ ಈ ಮೊತ್ತ ಬೆನ್ನತ್ತಿದ್ದ ಶ್ರೀಲಂಕಾ 18.4 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು 167ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಟೀಂ ಇಂಡಿಯಾ ಇನ್ನಿಂಗ್ಸ್: ಫೈನಲ್ಸ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಪರವಾಗಿ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದನಾ ಇನ್ನಿಂಗ್ಸ್ ಆರಂಭಿಸಿದರು. ಶಫಾಲಿ ವರ್ಮಾ 16(19) ರನ್ ಗಳಿಸಿ ಬೇಗನೇ ಔಟಾದರು. ಬಳಿಕ ಬಂದ ಉಮಾ ಚೆಟ್ರಿ 9(7) ರನ್ ಗಳಿಸಿ ಔಟಾದರು. ಬಳಿಕ ಬಂದ ತಂಡ ನಾಯಕಿ ಹರ್ಮನ್‌ಪ್ರೀತ್ ಕೌರ್ 11(11) ರನ್ ಗಳಿಸಿ ಪೆವಿಲಿಯನ್ ಸೇರಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರು ಮತ್ತೊಂದೆಡೆ ಸುಭದ್ರ ಇನ್ನಿಂಗ್ಸ್ ಕಟ್ಟಿದ ಸ್ಮೃತಿ ಮಂದನಾ 47 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್ ಗಳಿಸಿ ಆಸರೆಯಾದರು. ಉಳಿದಂತೆ ರೋಡ್ರಿಗಸ್ 29(16) ರನ್, ರಿಚಾ ಘೋಷ್ 30(14) ರನ್ ಗಳಿಸಿದರು. ಪೂಜಾ ಹಾಗೂ ರಾಧಾ ಯಾದವ್ ಔಟಾಗದೇ ತಲಾ 5(6)ರನ್ ಹಾಗೂ 1(1)ರನ್ ಗಳಿಸಿದರು.
ಶ್ರೀಲಂಕಾ ಪರವಾಗಿ ಕವಿಶಾ 2, ಪ್ರಬೋಧನಿ, ಸಚಿನಿ ಹಾಗೂ ಚಾಮಿರಾ ಅಟಾಪಟ್ಟು ತಲಾ ಒಂದೊಂದು ವಿಕೆಟ್ ಕಬಳಿಸಿ ಮಿಂಚಿದರು.
ಶ್ರೀಲಂಕಾ ಇನ್ನಿಂಗ್ಸ್: ಭಾರತ ತಂಡ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ವಿ.ಗುಣರತ್ನೆ 1(3) ರನ್ ಗಳಿಸಿ ಬಂದ ವೇಗದಲೇ ಹಿಂತಿರುಗಿದರು. ನಾಯಕಿ ಚಾಮರಿ ಅಟಾಪಟ್ಟು 43 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 61 ರನ್ ಗಳಿಸಿ ನಿರ್ಗಮಿಸಿದರು.
ನಂತರ ಜೊತೆಯಾದ ಸಮರವಿಕ್ರಮ ಹಾಗೂ ಕವಿಶಾ ತಂಡಕ್ಕೆ ಗೆಲುವು ತಂದುಕೊಟ್ಟರು. ಹರ್ಷಿತಾ ಸಮರವಿಕ್ರಮ ಔಟಾಗದೇ 51 ಎಸೆತ, 6ಬೌಂಡರಿ 2 ಸಿಕ್ಸರ್ ಸೇರಿ 69 ರನ್ ಗಳಿಸಿದರು. ಇವರಿಗೆ ಜೊತೆಯಾಗಿ ಕವಿಶಾ ಔಟಾಗದೆ 30(16) ರನ್‌ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಟೀಂ ಇಂಡಿಯಾ ಪರ ದೀಪ್ತಿ ಶರ್ಮಾ ಒಂದು ವಿಕೆಟ್ ಪಡೆದರು.
ಪಂದ್ಯ ಶ್ರೇಷ್ಠ: ಹರ್ಷಿತಾ ಸಮರವಿಕ್ರಮ
ಸರಣಿ ಶ್ರೇಷ್ಠ: ಚಾಮರಿ ಅಟಾಪಟ್ಟು





