ಕೊಲಂಬೊ : ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಕಾರ್ಯದರ್ಶಿ ಜಯ್ ಶಾ ನಡೆಸುತ್ತಿದ್ದಾರೆ ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗ ಗಂಭೀರ ಆರೋಪ ಮಾಡಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಬಿಸಿಸಿಐಗೆ ವಿಧೇಯಕರಾಗಿರುವ ಸ್ಥಿತಿ ನಿರ್ಮಾಣವಾಗಿದೆ. ಮಂಡಳಿಯ ಅಧಿಕಾರಿಗಳ ಜೊತೆ ಶಾ ಸಂಪರ್ಕ ಹೊಂದಿದ್ದು, ಭಾರತದ ಒಬ್ಬ ವ್ಯಕ್ತಿ ಶ್ರೀಲಂಕಾ ಕ್ರಿಕೆಟ್‌ನ್ನು ಹಾಳುಮಾಡುತ್ತಿದ್ದಾರೆ. ಇದಕ್ಕೆ ಮಂಡಳಿಯಲ್ಲಿನ ಇತ್ತೀಚೆಗಿನ ಬೆಳವಣಿಗೆಗಳು, ಅವ್ಯವಸ್ಥೆ ಹಾಗೂ ಭ್ರಷ್ಟಾಚಾರಕ್ಕೆ ಜೈ ಶಾ ನೇರ ಕಾರಣ ಎಂದು ಅವರು ದೂರಿದ್ದಾರೆ.
ಜೈ ಶಾ ತಂದೆ ಭಾರತದ ಗೃಹ ಮಂತ್ರಿಯಾಗಿದ್ದು, ಆ ಕಾರಣಕ್ಕಾಗಿ ಅವರು ಪ್ರಭಾವಶಾಲಿಯಾಗಿದ್ದಾರೆ. ತಾನು ಲಂಕಾ ಕ್ರಿಕೆಟ್ ಮಂಡಳಿಯನ್ನು ನಿಯಂತ್ರಿಸಬಹುದು ಎಂದು ಅವರು ಭಾವಿಸಿದ್ದಾರೆ ಎಂದು ಹೇಳೀರುವುದಾಗಿ ಲಂಕಾದ daily mirrior ದಿನಪತ್ರಿಕೆ ವರದಿ ಮಾಡಿದೆ.
ಲಂಕಾ ತಂಡದ ಕಳಪೆ ಪ್ರದರ್ಶನ, ಕ್ರಿಕೆಟ್ ಮಂಡಳಿಯಲ್ಲಿನ ಅವ್ಯವಸ್ಥೆ ಹಾಗೂ ಸರ್ಕಾರದ ಹಸ್ತಕ್ಷೇಪದಿಂದಾಗಿ ಲಂಕಾ ಕ್ರಿಕೆಟ್ ಮಂಡಳಿಯನ್ನು ಐಸಿಸಿ ಅಮಾನತುಗೊಳಿಸಿತ್ತು. ನಂತರ ಅರ್ಜುನ ರಣತುಂಗ ನೇತೃತ್ವದಲ್ಲಿ ತಾತ್ಕಾಲಿಕ ಮಂಡಳಿಯನ್ನು ಸರ್ಕಾರ ನೇಮಿಸಿತ್ತು. 7 ಸದಸ್ಯರ ಈ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರಿಬ್ಬರು ಇದ್ದಾರೆ.