ಹೈದರಾಬಾದ್: ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ಅನ್‌ಬೀಟನ್ ಇನ್ನಿಂಗ್ಸ್ ಸಹಾಯದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 10 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಆ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಸೀಸನ್‌ನ 57ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿ 166 ರನ್ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ಕೇವಲ 9.4 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 167 ರನ್ ಬಾರಿಸಿ ಗೆದ್ದು ಬೀಗಿತು.
ಎಲ್‌ಎಸ್‌ಜಿ ಇನ್ನಿಂಗ್ಸ್: ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಎಲ್‌ಎಸ್ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಡಿಕಾಕ್ 2(5) ವಿಕೆಟ್ ಬೇಗನೇ ಕಳೆದುಕೊಂಡರು. ಬಳಿಕ ಬಂದ ಸ್ಟೋಯ್ನೀಸ್ 3(5) ರನ್‌ಗಳಿಸಿದರು. ನಾಯಕ ರಾಹುಲ್ 29(33) ಮಂದಗತಿಯ ಆಟವಾಡಿ ನಿರ್ಗಮಿಸಿದರು. ಕೃನಾಲ್ ಪಾಂಡ್ಯ 24(21) ರನ್ ಗಳಿಸಿ ಔಟಾದರು.
ಬಳಿಕ ಒಂದಾದ ನಿಕೋಲಸ್ ಪೂರನ್ ಹಾಗೂ ಅಯುಷ್ ಬದೋನಿ ತಂಡಕ್ಕೆ ಚೇತರಿಕೆ ಆಟವಾಡಿದರು. ನಿಕೋಲಸ್ ಪೂರನ್ 26 ಎಸೆತ ಎದುರಿಸಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 48 ರನ್ ಗಳಿಸಿದರೇ, ಆಯುಷ್ ಬದೋನಿ 30 ಎಸೆತ ಎದುರಿಸಿ 9 ಬೌಂಡರಿ ಸಹಿತ 55 ರನ್ ಗಳಿಸಿ ತಂಡದ ಮೊತ್ತ 160 ಗಡಿ ದಾಟಲು ಸಹಕರಿಸಿದರು.
ಹೈದರಾಬಾದ್ ಪರ ಭುವನೇಶ್ವರ್ 2, ಪ್ಯಾಟ್ ಕಮಿನ್ಸ್ 1 ವಿಕೆಟ್ ಪಡೆದು ಮಿಂಚಿದರು.
ಎಸ್‌ಆರ್‌ಎಚ್: ಲಖನೌ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಎಸ್‌ಆರ್‌ಎಚ್‌ಗೆ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಭರ್ಜರಿ ಇನ್ನಿಂಗ್ಸ್ ಕಟ್ಟಿದರು. ಈ ಇಬ್ಬರು ಎಡಗೈ ದಾಂಡಿಗರು ಲಖನೌ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದರು. ಹೈದರಾಬಾದ್ ಕ್ರೀಡಾಂಗಣದ ಸುತ್ತಾ ಸಿಕ್ಸರ್, ಫೋರ್‌ಗಳ ಸುರಿಮಳೆ ಸುರಿಸಿದರು. ಹೈದರಾಬಾದ್ ಯಾವುದೇ ವಿಕೆಟ್ ಕಳೆದುಕೊಳ್ಳದೇ ಗುರಿ ಮುಟ್ಟಿತು.
ಇಬ್ಬರು ಔಟಾಗದೇ ಉಳಿದು ಪಂದ್ಯವನ್ನು ಗೆಲ್ಲಿಸಿದರು. ಕ್ರಮವಾಗಿ ಟ್ರಾವಿಸ್ ಹೆಡ್ 30 ಎಸೆತ ಎದುರಿಸಿ 8 ಬೌಂಡರಿ ಮತ್ತು 8 ಸಿಕ್ಸರ್ ಸಹಿತ 89 ರನ್ ಚಚ್ಚಿದರೇ, ಅಭಿಷೇಕ್ ಶರ್ಮಾ 28 ಎಸೆತದಲ್ಲಿ 8 ಬೌಂಡರಿ 6 ಸಿಕ್ಸರ್ ಸೇರಿ 75 ರನ್ ಗಳಿಸಿ ಪಂದ್ಯವನ್ನು ಗೆಲ್ಲಿಸಿದರು.
ಎಸ್‌ಆರ್‌ಎಚ್ ತಂಡವನ್ನು ಕಟ್ಟಿ ಹಾಕುವಲ್ಲಿ ಲಖನೌ ಬೌಲರ್‌ಗಳು ಪರದಾಡಿದರು.





