ಹೈದರಾಬಾದ್: ಸಂಘಟಿತ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶನ ಮೂಲಕ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಟ್ಟಿಹಾಕುವಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಯಶಸ್ವಿಯಾಗಿದೆ.
ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡ ಸಿಎಸ್‌ಕೆ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಸೋಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 165 ರನ್ ಕಲೆ ಹಾಕಿದೆ. ಈ ಸಾಧಾರಣ ಮೊತ್ತ ಬೆನ್ನತ್ತಿದ ಎಸ್‌ಆರ್‌ಎಚ್ 18.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 166 ರನ್ ಕೆಲಹಾಕಿ ಗೆದ್ದು ಬೀಗಿತು.
ಸಿಎಸ್‌ಕೆ ಇನ್ನಿಂಗ್ಸ್: ಆರಂಭಿಕ ದಾಂಡಿಗರಾಗಿ ಬಂದ ನಾಯಕ ಋತುರಾಜ್ ಗಾಯಕ್ವಾಡ್ 26, ರಚಿನ್ ರವೀಂದ್ರ 12 ರನ್‌ಗೆ ಔಟಾದರು. ಬಳಿಕ ಬಂದ ಎಡಗೈ ದಾಂಡಿಗ ಶಿವಂ ದುಬೆ 24 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಿತ 45 ರನ್ ಬಾರಿಸಿದ್ದೇ ಸಿಎಸ್‌ಕೆ ಪರ ಅತ್ಯಧಿಕ ರನ್ ಆಗಿತ್ತು. ಅಜಿಂಕ್ಯ ರಹಾನೆ 35, ರವೀಂದ್ರ ಜಡೇಜ ಅಜೇಯ 31 ರನ್ ಮತ್ತು ಡೇರಿಯಲ್ ಮಿಎಲ್ 13 ರನ್‌ಗಳಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಕೆಲಹಾಕುವಲ್ಲಿ ಯಶಸ್ವಿಯಾದರು.
ಎಸ್‌ಆರ್‌ಎಚ್ ಪರ ಭುವನೇಶ್ವರ್ ಕುಮಾರ್, ಕಮಿನ್ಸ್ ಉನಾದ್ಯಟ್ ಶಾಹಬಾಜ್ ಮತ್ತು ಟಿ. ನಟರಾಜನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಎಸ್‌ಆರ್‌ಎಚ್ ಇನ್ನಿಂಗ್ಸ್: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿ ಎಸ್‌ಆರ್‌ಎಚ್‌ಗೆ ಭರ್ಜರಿ ಆರಂಭ ದೊರೆಯಿತು. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ 37, (12 ಎಸೆತ, 3ಬೌಂಡರಿ 4 ಸಿಕ್ಸರ್) ಉತ್ತಮವಾಗಿ ಬ್ಯಾಟ್ ಬೀಸಿ ಔಟಾದರು. ಇವರಿಗೆ ಜೊತೆಯಾಗಿ ಟ್ರಾವಿಸ್ ಹೆಡ್ 31, ಷಹಬಾಜ್ ಅಹ್ಮದ್ 18 ರನ್ ಗಳಿಸಿದರು. ಆರಂಭದಿಂದಲೂ ತಾಳ್ಮೆ ಆಟವಾಡಿದ ಮಾರ್ಕ್ರಂ 36 ಎಸೆತಗಳಲ್ಲಿ 4ಬೌಂಡರಿ, 1 ಸಿಕ್ಸರ್ ಸಹಿತ 50 ರನ್ ಗಳಿಸಿ ತಂಡ ಗೆಲ್ಲಲ್ಲು ಪ್ರಮುಖ ಪಾತ್ರ ವಹಿಸಿದರು.

ಕೊನೆಯಲ್ಲಿ ಒಂದಾದ ಹೆನ್ರಿಚ್ ಕ್ಲಾಸೆನ್ 10 ಮತ್ತು ನಿತೀಶ್ ರೆಡ್ಡಿ 14 ರನ್ ಬಾರಿಸಿದರು ತಂಡಕ್ಕೆ ಗೆಲುವು ತಂದುಕೊಟ್ಟರು. ಲೋಕಲ್ ಬಾಯ್ ನಿತೀಶ್ ರೆಡ್ಡಿ ಚಾಹರ್ ಎಸೆದ 18ನೇ ಓವರ್‌ನ ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸಿ ಪಂದ್ಯವನ್ನು ಮುಗಿಸಿದರು.
ಸಿಎಸ್‌ಕೆ ಪರ ಮೋಯಿನ್ ಅಲಿ 2, ದೀಪಕ್ ಚಾಹರ್ ಮತ್ತು ತೀಕ್ಷಣ ತಲಾ ಒಂದು ವಿಕೆಟ್ ಪಡೆದರು.





